ಗಣೇಶ ಉತ್ಸವ ಸೇರಿದಂತೆ ಧಾರ್ಮಿಕ ಉತ್ಸವಗಳಲ್ಲಿ ರಾಜಕೀಯ ನುಸುಳಬಾರದು. ಬದಲಾಗಿ ಜನರಲ್ಲಿ ಸಾಮರಸ್ಯ ಮೂಡಿಸುವ ವೇದಿಕೆಯಾಗಬೇಕೆಂದು ಚಿತ್ರದುರ್ಗದ ಮಾದಾರ ಚಿನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚಿನ್ನಯ್ಯ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಬಾಲ ಗಂಗಾಧರ್ ತಿಲಕ್ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಸಂಘಟಿಸಲು ಗಣಪತಿ ಉತ್ಸವ ಪ್ರಾರಂಭಿಸಿದರು. ಆದರೆ ಈಗ ದೇಶದಲ್ಲಿ ಏಕತೆ, ಭ್ರಾತೃತ್ವ, ಸಾಮರಸ್ಯಕ್ಕಾಗಿ ಮತ್ತೊಂದು ಹೋರಾಟ ಮಾಡುವ ಪರಿಸ್ಥಿತಿ ಒಂದೊದಗಿದೆ. ನಮ್ಮ ದೇಶದಲ್ಲಿ ಸಾವಿರಾರು ಜಾತಿ, ಭಾಷೆ ಮೈಗೂಡಿಸಿಕೊಂಡಿದ್ದು, ಹಬ್ಬ, ಜಾತ್ರೆ ಬಂದಾಗ ಆಯಾ ಸಮುದಾಯಗಳು ಪ್ರತ್ಯೇಕವಾಗಿ ಆಚರಣೆ ಮಾಡುವುದು ಕಾಣುತ್ತಿದ್ದೇವೆ. ಆದರೆ ಗಣೇಶ ಉತ್ಸವದಲ್ಲಿ ಮಾತ್ರ ಎಲ್ಲಾ ಸಮುದಾಯದವರು ಒಟ್ಟಾಗಿ ಸೇರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ವಾತಾವರಣ ಸದ್ಬಳಕೆ ಮಾಡಿಕೊಂಡು ಗಣಪತಿ ಸಮಿತಿಯವರು ಸಾಮರಸ್ಯದ ಮೂಲಕ ನಾವೆಲ್ಲರೂ ಭಾರತೀಯರೆಂಬ ಭಾವನೆ ಮೂಡಿಸುವ ಪೂರಕವಾದ ಧಾರ್ಮಿಕ ವೇದಿಕೆಯನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ಈ ಸಮಾಜದಲ್ಲಿ ವ್ಯಕ್ತಿಗತ ಹಾಗೂ ಸ್ವಾರ್ಥತೆ ಬೆಳೆವಣಿಗೆಯಿಂದ ಸಾಮರಸ್ಯ ಬೆಸುಗೆಗೆ ದಕ್ಕೆಯಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಪರಕೀಯ ಆಳ್ವಿಕೆಗೆ ನೀಡಲು ನಾವೇ ಕಾರಣಕರ್ತರಾಗುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಳ್ಳುವ ಶಕ್ತಿಗಳನ್ನು ಮೊದಲು ಮಟ್ಟ ಹಾಕಬೇಕು. ಜಾತಿ ಜಾತಿಗಳಲ್ಲಿ ನೂರಾರು ಪಂಗಡ ನಿರ್ಮಿಸಿಕೊಂಡು ಜಾತಿ, ಗುಂಪು, ಧರ್ಮದ ಬೇಲಿ ಹಾಕಿಕೊಂಡು ಮಾನವರ ನಡುವೆ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಗಣೇಶ ಉತ್ಸವದ ಮೂಲಕ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿದರು. ಸಾರ್ವಜನಿಕ ಹಿಂದೂ ಮಹಾಸಭಾ ಸೇವಾ ಸಮಿತಿ ಅಧ್ಯಕ್ಷ ಪಿ.ಜಿ.ಅನುಕುಮಾರ್, ಉದ್ಯಮಿ ಮಂಚೇಗೌಡ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಮೂಡಿಗೆರೆ ಶ್ರೀ ಹಿರೇದೇವಿರಮ್ಮನ ಬನದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.



