ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೆ ಅನುದಾನ ಬಿಡುಗಡೆ ಮಾಡುವಂತೆ ಭಾರತೀಯ ಕಿಸಾನ್ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಸಂಜಯ್ ಗೌಡ ಒತ್ತಾಯಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪೂಂಜಾಲಕಟ್ಟೆಯಿಂದ ಚಾರ್ಮಾಡಿ ಘಾಟ್ ನ 11 ನೇ ತಿರುವಿನ ವರೆಗೆ ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರ್ಕಾರದಿಂದ 343.74ಕೋಟಿ ಹಣ ಮಂಜೂರಾಗಿದ್ದು ರಸ್ತೆ ವಿಸ್ತರಣೆ ಗುತ್ತಿಗೆದಾರರು ಟೆಂಡರ್ ಹಿಡಿದು ಕಾಮಗಾರಿ ನಡೆಯುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಗಡಿ ಭಾಗದಿಂದ ಕೊಟ್ಟಿಗೆಹಾರದವರೆಗೆ ರಸ್ತೆ ವಿಸ್ತರಣೆಗೆ ಯಾವುದೇ ಹಣ ಮಂಜೂರಾಗಿಲ್ಲ.
ಇದರಿಂದ ಚಾರ್ಮಾಡಿ ಘಾಟ್ ರಸ್ತೆ ಉಳಿಸುವ ಹೋರಾಟ ಸಮಿತಿ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ. ಬರೀ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರಸ್ತೆ ಮಾತ್ರ ವಿಸ್ತರಣೆ ಮಾಡಿದರೆ ಉಳಿದ ಘಾಟ್ ರಸ್ತೆ ದುರ್ಬಲವಾಗಿ ಮುಂದೆ ಬಂದ್ ಆಗುವ ಆತಂಕ ಎದುರಾಗಬಹುದು. ಇದರಿಂದ ಈ ಭಾಗದ ವ್ಯಾಪಾರಸ್ಥರು, ಹಾಗೂ ಆಸ್ಪತ್ರೆ ಅವಲಂಬಿಸಿರುವ ಮಲೆನಾಡಿನ ಜನತೆಗೆ ತುಂಬಾ ತೊಂದರೆ ಅನುಭವಿಸುವಂತಾಗಬಹುದು. ಹಾಗಾಗಿ ಚಿಕ್ಕಮಗಳೂರು ವ್ಯಾಪ್ತಿಯ ಚಾರ್ಮಾಡಿ ಘಾಟ್ ರಸ್ತೆ ವಿಸ್ತರಣೆಗೂ ರೂಪುರೇಷೆ ತಯಾರಿಸಿ ವಿಸ್ತರಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ವಿಲ್ಲುಪುರಂ ರಸ್ತೆ ಭಾಗದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ರಸ್ತೆಯ ರೂಪುರೇಷೆಯ ಮಾಹಿತಿ ನೀಡಬೇಕು. ಚಾರ್ಮಾಡಿ ಘಾಟ್ ವಿಸ್ತರಣೆ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಜನರಲ್ಲಿ ಗೊಂದಲವಿದ್ದು ಇಂತಹ ವಿಷಯಗಳಿಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.



