ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಸಹಕಾರಿಯಾಗಲಿದ್ದು ಬೆಳೆಯುವ ಚಿಗುರಿಗೆ ದಾರಿ ದೀಪ ಎಂದು ಮೂಡಿಗೆರೆ ತಾಲ್ಲೂಕು ತಳವಾರ ಗ್ರಾಮದ ಮುಖಂಡ ಕಳಸೆಗೌಡ ಹೇಳಿದರು.
ಅವರು ಗುರುವಾರ ತಳವಾರ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪಲ್ಗುಣಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಕಾಣ ಸಿಗುತ್ತಾರೆ. ಮಕ್ಕಳ ಪ್ರತಿಭೆ ಹೊರ ತೆಗೆಯಲು ಪ್ರತಿಭಾ ಕಾರಂಜಿಯಂತಹ ಉತ್ತಮ ಕಾರ್ಯಕ್ರಮದಿಂದ ಸಾಧ್ಯವಾಗುತ್ತಿದ್ದು, ಇದಕ್ಕೆ ಶಿಕ್ಷಕರ ಪಾತ್ರ ಕೂಡ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಗ್ರಾಮದ ಹಿರಿಯ ಮುಖಂಡ ಡಿ.ಎಂ.ಅಣ್ಣೆಗೌಡ ಮಾತನಾಡಿ, ಪ್ರತಿ ಮಕ್ಕಳಲ್ಲಿ ಒಂದೊಂದು ಪ್ರತಿಭೆಗಳು ಅಡಗಿ ಕುಳಿತಿರುತ್ತದೆ. ಅದನ್ನು ಗಮನಿಸಿ ಎಳೆ ವಯಸ್ಸಿನಲ್ಲಿಯೇ ಅನಾವರಗೊಳಿಸಲು ಪೋಷಕರು ಮತ್ತು ಶಿಕ್ಷಕರು ಪ್ರಯತ್ನಿಸಬೇಕು. ಮಕ್ಕಳಲ್ಲಿ ಪ್ರತಿಭೆಯ ಬೆಳೆ ಬಿತ್ತುವ ಕಾರ್ಯ ಮಾಡಿದರೆ ಅದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸರಕಾರಿ ನೌಕರ ಸಂಘದ ನಿರ್ದೇಶಕ ಎಚ್.ಮಂಜಪ್ಪ. ಪಿಡಿಒ ವಾಸುದೇವ್, ಎಸ್‍ಡಿಎಂಸಿ ಅಧ್ಯಕ್ಷ ಅಣ್ಣಪ್ಪ, ಟಿ.ಡಿ.ರುದ್ರಪ್ಪಗೌಡ, ಬೊಮ್ಮಯ್ಯ, ಸುರೇಶ್, ಶಿಕ್ಷಕರಾದ ಶೋಭಾ, ಶ್ಯೆಲಾರಾದ್ಯ, ಗುರುಮೂತಿ, ಕೀರ್ತಿ, ಸೋಮಶೇಖರ್ ಮತ್ತಿತರರಿದ್ದರು.




