ಇತ್ತೀಚೆಗೆ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೂಡಿಗೆರೆ ತಾಲ್ಲೂಕಿನ ನಡ್ನಳ್ಳಿ ಗ್ರಾಮದ ಮೇಘನಾ ಅವರೊಂದಿಗೆ ಮೂಡಿಗೆರೆಯ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಸಂವಾದ ನಡೆಸಲಾಯಿತು. ಯುರೇಕಾ ಅಕಾಡೆಮಿ ಮತ್ತು ಜೇಸಿಐ ಮೂಡಿಗೆರೆ ಸಹಯೋಗದಲ್ಲಿ ಸಂವಾದ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮೇಘನಾ ಸಾಧನೆಗೆ ಯಾವುದೇ ಸಣ್ಣಪುಟ್ಟ ವಿಚಾರಗಳು ಅಡ್ಡಿಯಾಗಲಾರವು. ನಮಗೆ ಸಾಧನೆಯ ಕಡೆಗೆ ಪ್ರೀತಿ ಮತ್ತು ಸತತ ಪರಿಶ್ರಮ ಇರಬೇಕು. ನಿಗದಿತ ಗುರಿ ಮತ್ತು ಆತ್ಮವಿಶ್ವಾಸದಿಂದ ಉನ್ನತ ಸಾಧನೆ ಮಾಡಬಹುದು ಎಂದರು.

ಯುರೇಕಾ ಆಕಾಡೆಮಿ ಸಂಸ್ಥಾಪಕರಾದ ದೀಪಕ್ ದೊಡ್ಡಯ್ಯ ಮಾತನಾಡಿ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬದ ಮೇಘನಾ ಅವರ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಸಾಧನೆಗೆ ಯಾವುದೇ ಹಿನ್ನಲೆ ಮುಖ್ಯವಲ್ಲ, ಸತತ ಪರಿಶ್ರಮದಿಂದ ಸಮಯದ ಸದ್ಬಳಕೆಯಿಂದ ಸಾಮಾನ್ಯ ವ್ಯಕ್ತಿಯು ಅಸಮಾನ್ಯ ಸಾಧನೆ ಮಾಡಲು ಸಾಧ್ಯ ಎಂದರು.
ಮೂಡಿಗೆರೆ ಜೇಸಿ ಅಧ್ಯಕ್ಷರಾದ ಸುಪ್ರೀತ್ ಕಾರಬೈಲ್, ಜೇಸಿಐ ಯುವ ಮಾಣಿಕ್ಯದ ಅಧ್ಯಕ್ಷರಾದ ಮಹಮ್ಮದ್ ಇರ್ಷಾದ್, ಮೂಡಿಗೆರೆ ಜೇಸಿಐ ನಿಯೋಜಿತ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಕೃತಿ ಪ್ರದೀಪ್, ಸುದೀಪ್ ತ್ರಿಪುರ, ಸುನಿಲ್, ಮುಖಂಡರಾದ ಶಿಶೀರ್ ಮತ್ತು ಕಾಲೇಜಿನ ಡೀನ್ ಮುಂತಾದವರು ಉಪಸ್ಥಿತರಿದ್ದರು.



