ವೃದ್ಧ ದಂಪತಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲಂದೂರು ಸಮೀಪದ ಕೊಳಗಾಮೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆ ಮಾಡಿದ ಮೊಮ್ಮಗ ಪರಾರಿಯಾಗಿದ್ದಾನೆ.
ಬಸಪ್ಪ (65) ಅವರ ಪತ್ನಿ ಲಲಿತಮ್ಮ (58) ಮೊಮ್ಮಗನಿಂದ ಹತ್ಯೆಯಾಗಿದ್ದು, ಹತ್ಯೆ ಮಾಡಿದ ನಿಶಾಂತ್ ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ:
ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಕೊಳಗಾಮೆ ಗ್ರಾಮದ ಮೊಗಣ್ಣಗೌಡ ಎಂಬವರ ಕಾಫಿತೋಟದಲ್ಲಿ ಕಳೆದ 25 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಬಸಪ್ಪ ಲಲಿತಮ್ಮ ದಂಪತಿ ಕೊಳಗಾಮೆ ಗ್ರಾಮದಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್ ಬಸಪ್ಪನ ಮನೆಗೆ ಬಂದಿದ್ದು, ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲೀಲಪ್ಪ ದಂಪತಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ನಿಶಾಂತ್ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲೀಲಮ್ಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗುತ್ತಿದೆ.
ಸ್ಥಳಕ್ಕೆ ಮಲ್ಲಂದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕೊಳಗಾಮೆ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಂಬಂಧಿಕರು ಇಲ್ಲದ ಕಾರಣಕ್ಕೆ ಗುಬ್ಬಿಯಲ್ಲಿರುವ ಮೃತರ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದೆ. ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಮೊಮ್ಮಗ ನಿಶಾಂತ್ ಬಂಧನಕ್ಕೆ ಮಲ್ಲಂದೂರು ಪೊಲೀಸರು ಬಲೆ ಬೀಸಿದ್ದಾರೆ.



