ಕೃಷಿಯಲ್ಲಿ ಯಶಸ್ಸು ಕಾಣಬೇಕಾದರೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ ಎಂದು ನಿವೃತ್ತ ಕೃಷಿ ವಿಜ್ಞಾನಿ, ಕಾಳುಮೆಣಸು ತಜ್ಞ ಡಾ. ವೇಣುಗೋಪಾಲ್ ಹೇಳಿದರು.
ಅವರು ಗುರುವಾರ ಕಾಫಿ ಮಂಡಳಿ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್, ಗೋಣಿಬಿಡು ಇವರ ಸಹಯೋಗದಲ್ಲಿ ಗೋಣಿಬೀಡು ರೋಟರಿ ಹಾಲ್ ನಲ್ಲಿ ಏರ್ಪಡಿಸಿದ್ದ ಕಾಫಿ ಮತ್ತು ಕಾಳುಮೆಣಸು ಕೃಷಿ ತಾಂತ್ರಿಕತೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದು ರಾಜ್ಯದ ಮಲೆನಾಡು ಭಾಗದಲ್ಲಿ ಕಾಳುಮೆಣಸು ರೈತರಿಗೆ ವರದಾನವಾದ ಬೆಳೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಉತ್ತಮ ಬೇಡಿಕೆ ಇದ್ದು, ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರೆ ರೈತರು ಕಾಳುಮೆಣಸು ಬೆಳೆಯ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕಾಳುಮೆಣಸು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ರೋಗ ಮತ್ತು ಕೀಟಬಾಧೆಗಳಿಂದ ಬೆಳೆಯನ್ನು ಸಂರಕ್ಷಿಸಿ ಉತ್ತಮ ಫಸಲು ಪಡೆಯಲು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಕೃಷಿಯಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಬಹುಮುಖ್ಯವಾಗಿದೆ. ರೈತರು ಮುಖ್ಯ ಪೋಷಕಾಂಶಗಳ ಜೊತೆಗೆ ಸೂಕ್ಷ್ಮ ಪೋಷಕಾಂಶಗಳನ್ನು ಭೂಮಿಗೆ ನೀಡಿದರೆ ಯಾವುದೇ ಬೆಳೆಯಲ್ಲಾದರೂ ಉತ್ತಮ ಇಳುವರಿ ಪಡೆಯಬಹುದು ಎಂದರು. ಕಾಳುಮೆಣಸು ಬೆಳೆಯುವುದು ಎಷ್ಟು ಮುಖ್ಯವೋ ಅದರ ಸಂಸ್ಕರಣೆಯೂ ಬಹುಮುಖ್ಯ, ಮಾರುಕಟ್ಟೆಯಲ್ಲಿ ನಮ್ಮ ಭಾರತೀಯ ಕಾಳುಮೆಣಸಿಗೆ ಉತ್ತಮ ಬೇಡಿಕೆ ಇದ್ದು, ರೈತರು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕಾಫಿ ಕೊಯ್ಲು ಮತ್ತು ಕೊಯ್ಲೋತ್ತರ ಸಂಸ್ಕರಣೆ ಬಗ್ಗೆ ಮಾಹಿತಿ ನೀಡಿದ ಕಾಫಿ ಸಂಶೋಧನಾ ಕೇಂದ್ರದ ಡಾ. ನಾಗರಾಜ್ ಮಾತನಾಡಿ ಕಾಫಿ ಸಂಸ್ಕರಣೆ ಬಹುಮುಖ್ಯ ಭಾಗವಾಗಿದ್ದು, ಉತ್ತಮ ಬೆಲೆ ಸಿಗಬೇಕೆಂದರೆ ಕಾಫಿಯ ಸಂಸ್ಕರಣೆಯ ಕಡೆಗೆ ಬೆಳೆಗಾರರು ಹೆಚ್ಚಿನ ಗಮನಹರಿಸಬೇಕು. ಇಂದು ಅನೇಕ ವೈಜ್ಞಾನಿಕ ಉಪಕರಣಗಳು ಕಾಫಿ ಬೆಳೆ ಮತ್ತು ಸಂಸ್ಕರಣೆಯಲ್ಲಿ ಜಾರಿಯಲ್ಲಿದ್ದು, ಅವುಗಳನ್ನು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಡಾ. ವಿಕಾಸ್ ವಶಿಷ್ಠ ಅವರು ಕೃಷಿಯಲ್ಲಿ ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಚಿಕ್ಕಮಗಳೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ವೆಂಕಟೇಶ್ ಕೃಷಿ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಅವರು ಕಾರ್ಯಾಗಾರವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಫಿ ಮಂಡಳಿಯಿಂದ ರೈತರಿಗೆ ಅನೇಕ ಸಹಾಯಧನ ಯೋಜನೆ ಮತ್ತು ತರಬೇತಿಗಳನ್ನು ನೀಡಲಾಗುತ್ತಿದ್ದು, ಬೆಳೆಗಾರರು ಅದರಲ್ಲೂ ಮುಖ್ಯವಾಗಿ ಯುವ ಬೆಳೆಗಾರರು ಕಾಫಿ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗೋಣಿಬೀಡು ರೋಟರಿ ಅಧ್ಯಕ್ಷ ಹೆಚ್.ಎಸ್. ಪ್ರಸನ್ನ ಸ್ವಾಗತಿಸಿದರು, ಕಾರ್ಯದರ್ಶಿ ರತನ್ ಕುಮಾರ್ ಮರಾಬೈಲ್ ವಂದಿಸಿದರು. ಕಾಫಿ ಸಂಶೋಧನಾ ಕೇಂದ್ರದ ಡಾ. ಸೆಂಥಿಲ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.



