ರಾಜ್ಯ ಸರಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಭೂಮಿ ಮೇಲೆ ಹೆಚ್ಚುವರಿ ತೆರಿಗೆ ಕಟ್ಟಿಸಿಕೊಳ್ಳುವ ಮೂಲಕ ಸಾಮಾನ್ಯ ಜನರ ಬದುಕಿನಲ್ಲಿ ಚೆಲ್ಲಾಟವಾಡಲು ಹೊರಟಿದೆ ಎಂದು ಮೂಡಿಗೆರೆ ಪಟ್ಟಣದ ನಿವಾಸಿ ಎಂ.ವಿ.ಶ್ರೇಷ್ಠಿ ದೂರಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೆ ಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತನಗೆ ಸೇರಿದ ಖಾಲಿ ನಿವೇಶನವಿದ್ದು, ಕಳೆದ ವರ್ಷ ಕಂದಾಯ ಕಟ್ಟಿರಲಿಲ್ಲ. ಈಗ 2ವರ್ಷದ ಕಂದಾಯ ಕಟ್ಟಲು ನೋಟೀಸು ನೀಡಲಾಗಿದೆ. ಆದರೆ ಕಳೆದ ವರ್ಷ 1 ಅಡಿಗೆ ಭೂಮಿಯ ಮೇಲಿನ ತೆರಿಗೆ 40 ಪೈಸವಿತ್ತು. ಈ ವರ್ಷ 2 ರೂಪಾಯಿಗೇರಿದೆ. ಭಿಕ್ಷುಕ ಸೆಸ್, ಆರೋಗ್ಯ ಸೆಸ್, ಲೈಬ್ರರಿ ಸೆಸ್ ಮೊತ್ತ 3ರಿಂದ 4 ಪಟ್ಟು ಅಧಿಕ ಮಾಡಲಾಗಿದೆ. ಖಾಲಿ ನಿವೇಶನದಲ್ಲಿ ಯಾವುದೇ ಆದಾಯವಿಲ್ಲದೇ ದುಪ್ಪಟ್ಟು ಹಣ ಕಟ್ಟಲು ಅಸಾಧ್ಯವಿದ್ದರೂ ರಾಜ್ಯ ಸರಕಾರ ಇಂತಹ ಅವೈಜ್ಞಾನಿಕ ಆದೇಶ ಹೊರಡಿಸಿ ಸಾಮಾನ್ಯ ಜನರ ಮೇಲೆ ಸವಾರಿ ನಡೆಸಲಾರಂಭಿಸಿದೆ ಎಂದು ದೂರಿದರು.
ಕಳೆದ ವರ್ಷ ನಿಗದಿ ಮಾಡಿದ್ದ ಕಂದಾಯಕ್ಕಿಂತ ದುಪ್ಪಟ್ಟು ಹಣವನ್ನು ಗ್ರಾ.ಪಂ. ಮೂಲಕ ರಾಜ್ಯ ಸರಕಾರ ವಸೂಲಿ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಕೇವಲ ಖಾಲಿ ನಿವೇಶನ ಮಾತ್ರವಲ್ಲ. ಮನೆ, ಕಟ್ಟಡಗಳಿಗೂ ಹೆಚ್ಚುವರಿ ಕಂದಾಯ ಕಟ್ಟುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ರಾಜ್ಯಾಧ್ಯಂತ ಸಾಮಾನ್ಯ ಜನರು ಸಂಕಷ್ಟ ಎದುರಿಸುವಂತಾಗಿದೆ.
ಜನ ಸರಕಾರದ ವಿರುದ್ಧ ದಂಗೇಳುವ ಮುನ್ನ ಈ ಹೊಸ ಆದೇಶವನ್ನು ರದ್ದುಪಡಿಸಬೇಕು. ಇಲ್ಲವಾದರೆ ಡಿ.10ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ನಾಗರೀಕರು ಪ್ರತಿಭಟನೆಗೆ ಆಗಮಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ನಾಗೇಶ್ ಕೊಲ್ಲಿಬೈಲ್, ಉಬೇದ್ ರೆಹಮಾನ್, ರಿಯಾಜ್ ಅಹಮ್ಮದ್, ಮೊಹಮ್ಮದ್ ಉಪಸ್ಥಿತರಿದ್ದರು.



