ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮದುವೆ ಮಂಟಪದಲ್ಲೇ ಕಳ್ಳತನವಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ನಡೆದಿದೆ.
ಸಂಬಂಧಿಕರ ಸೋಗಿನಲ್ಲಿ ಬಂದ ಅಪರಿಚಿತ ಯುವಕನಿಂದಲೇ ಕಳ್ಳತನ ಆಗಿದೆ. ಅಂದಾಜು ಒಂದೂವರೆ ಲಕ್ಷ ಮೌಲ್ಯದ ಚಿನ್ನ ಮತ್ತು 5 ಸಾವಿರ ನಗದು ಕದ್ದು ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಕುಶಾಲನಗರ ನಗರ ಠಾಣೆಗೆ ವಧುವಿನ ಪೋಷಕರು ದೂರು ನೀಡಿದ್ದಾರೆ. ನಂತರ ಮದುವೆ ಮಂಟಪಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
ಇತ್ತೀಚೆಗೆ ಮೂಡಿಗೆರೆ ಸಮೀಪದ ಹಾಂದಿ ಗ್ರಾಮದಲ್ಲಿ ರಾಯಲ್ ಶಾಲಿಮಾರ್ ಹಾಲ್ ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿಯೂ ಕಳ್ಳರು ವಧುವಿನ ಕೊಠಡಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದರು. ಕಳ್ಳರ ಸುಳಿವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದರೂ ಇದುವರೆಗೆ ಕಳ್ಳರ ಬಂಧನವಾಗಿಲ್ಲ.
ಈ ಘಟನೆ ಮಾಸುವ ಮುನ್ನವೇ ಇದೀಗ ಕುಶಾಲನಗರದ ರೈತಭವನದಲ್ಲಿ ಮತ್ತೊಂದು ಇದೇ ರೀತಿಯ ಘಟನೆ ನಡೆದಿದೆ.
ಇದು ಒಂದು ವ್ಯವಸ್ಥಿತ ಗ್ಯಾಂಗ್ ನ ಕೃತ್ಯವಿರುವ ಹಾಗೆ ಕಾಣುತ್ತದೆ. ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕಳ್ಳರ ಗ್ಯಾಂಗ್ ಅನ್ನು ಹೆಡೆಮುರಿಕಟ್ಟುವ ಕೆಲಸ ಮಾಡಬೇಕಿದೆ.
ಮದುವೆ ಮಂಟಪದಲ್ಲಿ ಮದುವೆ ಮಾಡುವವರು ಚಿನ್ನಾಭರಣಗಳ ಬಗ್ಗೆ ನಿಗಾ ಇರಿಸಬೇಕಾಗಿದೆ. ಇಲ್ಲದೇ ಹೋದರೆ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆಯಿದೆ.



