ಮೂಡಿಗೆರೆ ವಕೀಲರ ಸಂಘದ ವತಿಯಿಂದ ಡಿಸೆಂಬರ್ 3, 2024 ರಂದು ವಕೀಲರ ದಿನಾಚರಣೆ ಸಂಘದ ಸಭಾಂಗಣದಲ್ಲಿ ಆಚರಿಸಲಾಯಿತು.
ಮೂಡಿಗೆರೆ ತಾಲ್ಲೂಕು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಶ್ರೀ ಜಯಪ್ರಕಾಶ್.ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,
ತಮ್ಮ ಭಾಷಣದಲ್ಲಿ ಅವರು “ಡಾ. ರಾಜೇಂದ್ರ ಪ್ರಸಾದ್ ಅವರ ನೆನಪಿನಲ್ಲಿ ವಕೀಲರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಅಂತಹ ಮಹಾನ್ ಚೇತನಗಳ ಜನ್ಮದಿನಗಳನ್ನು ಆಚರಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿದೆ. ವಕೀಲರು ಕೇವಲ ನ್ಯಾಯದ ಪಾಲಕರಷ್ಟೇ ಅಲ್ಲ, ಸಾಮಾಜಿಕ ಬದಲಾವಣೆಯ ಪ್ರಮುಖ ಅಂಶವಾಗಿದ್ದಾರೆ” ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ. ಶ್ರೀ ವಿಶ್ವನಾಥ್.ಎ, ತಮ್ಮ ಭಾಷಣದಲ್ಲಿ “ಡಾ. ಪ್ರಸಾದ್ ಮಹಾನ್ ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಮತ್ತು ಭಾರತದ ಪ್ರಥಮ ರಾಷ್ಟ್ರಪತಿ. ಅವರ ತ್ಯಾಗ ಮತ್ತು ದೇಶಭಕ್ತಿ ನಮ್ಮ ಕಾನೂನು ವ್ಯವಸ್ಥೆಗೆ ಶಾಶ್ವತ ಬೆಳಕಾಗಿದೆ. ನಮ್ಮ ಕೆಲಸವು ಸಮಾಜದ ಬದಲಾವಣೆಗೆ ಮಾರ್ಗದರ್ಶಿಯಾಗಬೇಕು” ಎಂದು ಅವರು ಯುವ ವಕೀಲರಿಗೆ ಪ್ರೇರಣೆ ನೀಡಿದರು.

ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರು, ಬಿ.ಟಿ. ನಟರಾಜ್, ತಮ್ಮ ಭಾಷಣದಲ್ಲಿ ನ್ಯಾಯದ ಪ್ರತಿಷ್ಠೆ ಕಾಯುವಲ್ಲಿ, ಸಮಾನತೆ ಮತ್ತು ನ್ಯಾಯತೆಯನ್ನು ಸ್ಥಾಪಿಸುವಲ್ಲಿ ವಕೀಲರ ಮಹತ್ವವನ್ನು ಬಿಂಬಿಸಿದರು. “ಈ ದಿನವನ್ನು ವಕೀಲರ ಪರಿಶ್ರಮ, ನಿಷ್ಠೆ ಮತ್ತು ಮಾನವೀಯ ಮೌಲ್ಯಗಳಿಗೆ ಸಲ್ಲುವ ಗೌರವದ ರೂಪದಲ್ಲಿ ಆಚರಿಸಲಾಗುತ್ತದೆ. ‘ಹ್ಯಾಂಡ್ ರೈಟಿಂಗ್ ಇಸ್ ಮೈಂಡ್ ರೈಟಿಂಗ್’ ಎಂಬ ಮಾತು ನಮಗೆ ಬರಹದ ಮಹತ್ವವನ್ನು ತಿಳಿಸುತ್ತದೆ. ಕ್ರಿಯಾಶೀಲ ವಕೀಲರು ಬರೆಯುವ ಅಭ್ಯಾಸವನ್ನು ಮಾಡಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಬೇಕು” ಎಂದು ಹೇಳಿದರು.
ಹಿರಿಯ ವಕೀಲರಾದ ಎಂ.ಎಸ್. ಗೋಪಾಲಗೌಡ, ಕೆ.ಎಸ್. ಆದಿತ್ಯ, ಬಿ. ಜಗದೀಶ್, ಮತ್ತು ಎಂ.ವಿ. ಜಯರಾಜ್ ಅವರು ಮಾತನಾಡಿದರು.
ವಕೀಲರ ಸಂಘದ ಕಾರ್ಯದರ್ಶಿ, ಕೆ.ಸಿ. ಚಂದ್ರಶೇಖರ್, ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಣೆ ಮಾಡಿದರು.ಶ್ರೀಮತಿ ಕೆ. ವಿಶಾಲ ಪ್ರಾರ್ಥನೆ ಮೂಲಕ ಕಾರ್ಯಕ್ರಮವನ್ನು ಶುಭಾರಂಭಿಸಿ, ವಂದನೆಗಳನ್ನು ಅರ್ಪಿಸಿದರು.


