ಚಂಡ ಮಾರುತದ ಪರಿಣಾಮದಿಂದಾಗಿ ಸುರಿದ ಅಕಾಲಿಕ ಮಳೆಯಿಂದ ಮಲೆನಾಡಿನಲ್ಲಿ ಕಾಫಿ, ಕಾಳು ಮೆಣಸು, ಭತ್ತ ಸೇರಿದಂತೆ ಇತರೇ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ. ಸರಕಾರ ನಷ್ಟಕ್ಕೆ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕೆಂದು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಕಾಳು ಮೆಣಸು ಸೇರಿದಂತೆ ಇತರೇ ಬೆಳೆಗಳು ಹಾನಿಯಾಗಿದ್ದು, ಈಗ ಮತ್ತೆ ಮಳೆ ಪ್ರಾರಂಭಗೊಂಡಿದೆ. ಅಲ್ಪ ಸ್ವಲ್ಪ ಉಳಿದಿದ್ದ ಕಾಫಿ ಹಣ್ಣಾಗಿ ಮಣ್ಣುಪಾಲಾಗುತ್ತಿದೆ. ಅಲ್ಲದೇ ಈಗ ಭತ್ತ ಮತ್ತು ಅಡಕೆ ಕೊಯ್ಲು ನಡೆಯುತ್ತಿದ್ದು, ಅದನ್ನು ಒಣಗಿಸಲು ಸಾಧ್ಯವಾಗದಂತಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ಮತ್ತು ಕಾಡು ಪ್ರಾಣಿಗಳ ಹಾವಳಿ ಮಲೆನಾಡು ಭಾಗದ ರೈತರು ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವಂತಾಗಿದೆ. ಇದರ ನಡುವೆ ಸಾಲ ವಸೂಲಿಗಾಗಿ ಬ್ಯಾಂಕ್‍ಗಳಿಂದ ಕೂಡ ರೈತರ ಮೇಲೆ ಒತ್ತಡ ಬೀರುತ್ತಿದ್ದು, ಇದೀಗ ಮತ್ತೆ ಮಳೆ ಆರ್ಭಟದಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿದ್ದು, ಇದೂವರೆಗೂ ಎನ್‍ಡಿಆರ್‍ಎಫ್ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರ ಬೆಳೆಗಾರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.


