goyal 2

 

 

ಕಾಫಿ ತೋಟದ ಮೇಲಿನ ಸಾಲವು ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.

ಈ ಬಗ್ಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಪಿಯೂಷ್ ಗೋಯೆಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾಫಿಯು ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಕಾಫಿ ತೋಟದ ಮೇಲೆ ಸಾಲ ಮಾಡಿ ಸಕಾಲದಲ್ಲಿ ಮರುಪಾವತಿಸಲಾಗದೇ ಸುಸ್ತಿಯಾಗಿರುವ ಸಾಲಗಾರರು ನಿಟ್ಟುಸಿರು ಬಿಡುವಂತಾಗಿದೆ.
ಏಕೆಂದರೆ ಬ್ಯಾಂಕ್ ಗಳು ನಿರ್ದಿಷ್ಟ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವೊಂದನ್ನು ಮುಂದಿಟ್ಟುಕೊಂಡು ಸಾರಾಸಗಟಾಗಿ ಎಲ್ಲಾ ಸುಸ್ತಿದಾರರಿಗೂ ಸರ್ಫೇಸಿ ಕಾಯ್ದೆಯಡಿ ತೋಟ ಹರಾಜು ಮಾಡುವ ನೋಟಿಸ್ ನೀಡುತ್ತಿದ್ದರು. ಇದರಿಂದ ನೂರಾರು ಕಾಫಿ ಬೆಳೆಗಾರರು ತಮ್ಮ ತೋಟ ಹರಾಜು ಆಗುತ್ತದೆ ಎಂದು ತೀವ್ರ ಆತಂಕದಲ್ಲಿದ್ದರು.

ಈ ಬಗ್ಗೆ ಬೆಳೆಗಾರರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದ್ದರು. ಬೆಳೆಗಾರರ ಸಂಘದ ನೇತೃತ್ವದಲ್ಲಿ ಸರ್ಫೇಸಿ ಕಾಯ್ದೆ ಬಾಧಿತ ರೈತರು ಬ್ಯಾಂಕ್ ಗಳ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಬೆಳೆಗಾರರಿಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಬೆಂಬಲ ನೀಡಿದ್ದರು.

ಇದೇ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಂಸದರು, ಶಾಸಕರ ಸಮ್ಮುಖದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ತೋಟ ಹರಾಜು ಪ್ರಕ್ರಿಯೆಯನ್ನು 6 ತಿಂಗಳ ವರೆಗೆ ಮುಂದೂಡುವಂತೆ ಸೂಚನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಹೆಚ್.ಡಿ. ತಮ್ಮಯ್ಯ , ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಉಪಸ್ಥಿತರಿದ್ದರು.

ಇದೀಗ ಇದೇ ವಿಚಾರವಾಗಿ ಸಂಸದರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರದಿಂದ ಉತ್ತರ ದೊರೆತಿದೆ. ಇದರಲ್ಲಿ ಕಾಫಿ ಸರ್ಫೇಸಿ ಕಾಯ್ದೆಯಡಿ ಬರುವುದಿಲ್ಲ ಎಂದು ಸ್ಪಷ್ಟವಾಗಿದೆ.

ಸಂಸದರು ಕಾಫಿ ಬೆಳೆಗಾರರ ಪರವಾಗಿ ತೋರಿದ ಕಾಳಜಿಗೆ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಕೆಜಿಎಫ್ ಅಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್,  ದೀಪಕ್ ದೊಡ್ಡಯ್ಯ, ನಿಡುವಾಳೆ ಚಂದ್ರು, ಬಿ.ಸಿ.ದಯಾಕರ್ ಸೇರಿದಂತೆ ಅನೇಕರು ಸಂಸದರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ