ಬಿಜೆಪಿ ಎಂಎಲ್ಸಿ ಸಿ.ಟಿ ರವಿ ವಿಧಾನ ಪರಿಷತ್ ಕಲಾಪದಲ್ಲಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಾಹುಲ್ ಗಾಂಧಿ ಅವರನ್ನು ನೀವು (ಸಿ.ಟಿ ರವಿ) ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನಾನು ನಿಮ್ಮ ಬಳಿ ಮೂವರು ಮುಗ್ದ ಜನರನ್ನು ಅಪಘಾತ ಮಾಡಿ ಹತ್ಯೆ ಮಾಡಿದ್ದೀರಲ್ಲವೇ, ನಿಮ್ಮನ್ನು ಕೊಲೆಗಾರ ಎನ್ನಲೇ ಎಂದಿದ್ದಕ್ಕೆ ತಾನೆ ನೀವು (ಸಿಟಿ ರವಿ) ನನಗೆ ಆ ಪದವನ್ನು ಬಳಸಿದ್ದು? ನೆನಪಿಲ್ಲವಾ? ಈಗೇನು ನಾಟಕ ಮಾಡುತ್ತಿದ್ದೀರಾ… ಅಬ್ಬ ಅಷ್ಟೊಂದು ದೊಡ್ಡ ಪಟ್ಟಿ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೀರಾ? ನಿಮ್ಮನ್ನು ಮಹಿಳೆಯರು ಕ್ಷಮಿಸಲ್ಲ ಎಂದು ಹೆಬ್ಬಾಳ್ಕರ್ ಕಿಡಿ ಕಾರಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪರಿಷತ್ ಕಲಾಪದ ವೇಳೆ ಸಿ.ಟಿ ರವಿ ಆ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾದ ವೀಡಿಯೋವನ್ನ ಪ್ರಸಾರ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿ.ಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ, ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವತ್ತಿಗೂ ಕ್ಷಮಿಸಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಿ.ಟಿ ರವಿಯವರೇ ನನಗೆ ಆ ಪದ ಬಳಸಿದೀರಿ, ಇಂತಹ ನೂರು ಸಿ.ಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ, ಇಂದೇ ಬಿಡುಗಡೆ ಮಾಡ್ತೇನಿ. ನಿಮಗೆ ನಾಚಿಗೆ ಆಗಬೇಕು ಎನ್‌ಕೌಂಟರ್ ಅಂತೀರಾ? ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಅಂದ್ರೆ ಸುಮ್ಮನಿರ್ತೀರಾ? ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿ.ಟಿ ರವಿ ಎಂದು ಹರಿಹಾಯ್ದರಲ್ಲದೇ, ಬಿಜೆಪಿಯಲ್ಲಿ ಯಾರಾದ್ರೂ ಒಬ್ಬರು ಕ್ಷಮೆ ಕೇಳಿದ್ರಾ? ಸಿ.ಟಿ ರವಿನ ಮೆರವಣಿಗೆ ಮಾಡ್ತಾರೆ, ಇದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು.. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ? ದೇವರ ಹತ್ರ ಹೋಗಿ ನಿಂತ್ಕೊಳ್ತಿರಿ, ಒಬ್ಬ ಹೆಣ್ಮಗಳಿಗೆ ಈ ರೀತಿ ಮಾತನಾಡಿ, ರಾಜಾರೋಷವಾಗಿ ಓಡಾಡ್ತಿದ್ದೀರಿ ನಿಮಗೆ ನಾಚಿಗೆ ಆಗಬೇಕು. ಇದನ್ನು ಸುಮ್ಮನೆ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ.



