ಅಡಿಕೆ ಮರಗಳಿಂದ ಅಡಿಕೆ ಗೊನೆಗಳನ್ನು ಕದ್ದು ಕೊಯ್ಯುತ್ತಿದ್ದ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಮುತ್ತಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.
ಮುತ್ತಿನಕೊಪ್ಪದಲ್ಲಿ ರೈತರ ಅಡಿಕೆ ತೋಟಗಳಲ್ಲಿ ನಿರಂತರ ಅಡಿಕೆ ಗೊನೆಗಳ ಕಳ್ಳತನವಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಒಂದೇ ತೋಟದಲ್ಲಿ ಸುಮಾರು 65 ರಿಂದ 75 ಗೊನೆಗಳ ಕಳ್ಳತನವಾಗಿತ್ತು. ದೂರನ್ನು ಸ್ವೀಕರಿಸಿ ವಿಚಾರಣೆಗೆ ಇಳಿದ ಪೊಲೀಸರು ಅಡಿಕೆ ಕಳ್ಳತನ ಮಾಡುತ್ತಿದ್ದ ದಂಪತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮಹಮ್ಮದ್ ಸಾಧಿಕ್ ಮತ್ತು ಆತನ ಪತ್ನಿ ನಸ್ರುಲ್ಲಾ ಎಂದು ಗುರುತಿಸಲಾಗಿದೆ.

ಆರೋಪಿಗಳು ಮೂಲತಃ ಕಡೂರು ತಾಲ್ಲೂಕಿನವರಾಗಿದ್ದು ಪ್ರಸ್ತುತ ಎನ್.ಆರ್.ಪುರ, ಶಿವಮೊಗ್ಗ ನಡುವಿನ ಲಕ್ಕಿನಕೊಪ್ಪದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಬಂಧಿತರಿಂದ ಸುಮಾರು 203 ಕೆ.ಜಿ. ಒಣ ಅಡಿಕೆ, ಕಳ್ಳತನಕ್ಕೆ ಬಳಸುತ್ತಿದ್ದ ಮಾರುತಿ ಜೆನ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಪಿಐ ಗುರುದತ್ ಕಾಮತ್, ಪಿಎಸ್ಐ ನಿರಂಜನಗೌಡ, ಜ್ಯೋತಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.



