ಕಂದಕಕ್ಕೆ ಕಾರು ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ನಡೆದಿದೆ.
ಅಣ್ಣು ನಾಯ್ಕ್ (85 ವರ್ಷ), ಅವರ ಪುತ್ರ ಚಿದಾನಂದ ನಾಯ್ಕ್ (56 ವರ್ಷ) ಮತ್ತು ಸ್ಥಳೀಯ ರಮೇಶ್ ನಾಯ್ಕ್ ಮೃತ ದುರ್ದೈವಿಗಳು. ಮೃತರು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳು ಎಂದು ತಿಳಿದುಬಂದಿದೆ. ಆಲ್ಟೋ K10 ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ.
ಕಾರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ಆಗಮಿಸುತ್ತಿತ್ತು ಎನ್ನಲಾಗಿದೆ. ಕುಟುಂಬದ ಪೂಜೆಯೊಂದನ್ನು ಮುಗಿಸಿ ಹಿಂತಿರುಗುವ ವೇಳೆ ನಸುಕಿನ ಜಾವ 4:15ರ ಸುಮಾರಿಗೆ ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತರಲ್ಲಿ ಚಿದಾನಂದ ನಾಯ್ಕ್ ಅವರು ಚಿಕ್ಕಮಗಳೂರು ಭವಿಷ್ಯ ನಿಧಿ (ಪಿಎಫ್) ಇಲಾಖೆ ಅಧಿಕಾರಿಯಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಹಾಸನ ಜಿಲ್ಲೆಯ ಭವಿಷ್ಯ ನಿಧಿ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಅವರು ತನ್ನ ಹುಟ್ಟೂರಿಗೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಚಿದಾನಂದ ಅವರೇ ಸ್ವತಃ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.



