ದಿನಾಂಕ 18.12.2024 ರಂದು ರಾತ್ರಿ ಬಾಳೆಹೊನ್ನೂರಿನಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಪಟ್ಟಣದ ಕಾಫಿ ವ್ಯಾಪಾರ, ದಿನಸಿ ಅಂಗಡಿ ಮತ್ತು ಬಾರ್ ರೋಲಿಂಗ್ ಶಟರ್ ಎತ್ತಿ ಒಟ್ಟು 22,000.00 ನಗದು, 27,000.00 ಮೌಲ್ಯದ ವಾಚ್ ಗಳು, 11,000.00 ಬೆಲೆಯ ಡಿವಿಆರ್ ಮತ್ತು 3 ಮದ್ಯದ ಬಾಟಲಿಗಳನ್ನು ಹಾಗೂ ಇನ್ನೊಂದು ದಿನಸಿ ಅಂಗಡಿ ಕಳ್ಳತನಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಬಾಳೆಹೊನ್ನೂರು ಪೊಲೀಸರು ಎರಡು ಜನರನ್ನು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ ರೂ. 15,000.00 ನಗದು, ರೂ. 9,000.00 ಬೆಲೆಯ ವಾಚ್, 3.5 ಲಕ್ಷ ಬೆಲೆಯ ಕಾರ್ ಮತ್ತು ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಆನಂದಪುರದಲ್ಲಿ ದಿನಸಿ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಗಳಿಂದ ಕಳವು ಮಾಡಿದ್ದ ಒಟ್ಟು ರೂ. 37,000.00 ಮೌಲ್ಯದ ಟಿವಿ, ಹೋಂ ಥಿಯೇಟರ್, ಹೀಟರ್ ಮತ್ತು ಇತರೇ ಉಪಕರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಚಿತ್ರದುರ್ಗ ಮೂಲದ ಕರುಣ ಮತ್ತು ಹುಸೇನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದರಿ ಪ್ರಕರಣಗಳನ್ನು ಪತ್ತೆ ಮಾಡಿದ ಪೊಲೀಸ್ ತಂಡದಲ್ಲಿ ಬಾಳೆಹೊನ್ನೂರು ಪಿಎಸ್ಐ ರವೀಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಕೆ ಜೆ, ಜಯರಾಮ, ಮಂಜುನಾಥ, ವಿನಾಯಕ, ಮನು ಮಂಜುನಾಥ, ಕಿರಣ್, ಭೀಮಸೇನಾ, ಚನ್ನಯ್ಯ ಮತ್ತು ಕಾರ್ತಿಕ್ ರವರು ಕಾರ್ಯನಿರ್ವಹಿಸಿರುತ್ತಾರೆ.



