ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಹಿರಿಯ ಸಾಹಿತಿ ಡಾ. ನೋರ್ಬೆರ್ಟ್ ಡಿಸೋಜ (ನಾ. ಡಿಸೋಜ) ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ 7.50ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಡಿಸೋಜ ಜನಿಸಿದರು. ಪರಿಸರ ಕಾಳಜಿ ಜೊತೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಅಲ್ಲದೆ ಅವರು ಬರೆದಿರುವ ಹಲವು ಕಾದಂಬರಿಗಳು ಸಿನಿಮಾಗಳಾಗಿ ಮೂಡಿಬಂದಿವೆ. ಇವುಗಳಲ್ಲಿ ‘ಕಾಡಿನ ಬೆಂಕಿ’ ಚಿತ್ರ ರಜತ ಕಮಲ ಪ್ರಶಸ್ತಿಯನ್ನ ಪಡೆದರೆ ‘ದ್ವೀಪ’ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿತ್ತು.
ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು ಬರೆದಿದ್ದಾರೆ. ‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಸಂದಿದೆ. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ.
ನಾ ಡಿಸೋಜ ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನೆಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿವೆ.
ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದ ನಾ. ಡಿಸೋಜ ಅವರು ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ನಾ. ಡಿಸೋಜ ಅವರು ಬರೆದಿರುವ ಕಾದಂಬರಿ ಆಧಾರಿತ ಶ್ರೀನಿವಾಸಮೂರ್ತಿ ನಿರ್ದೇಶನದ ‘ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದ ‘ಬೆಟ್ಟದಪುರದ ದಿಟ್ಟ ಮಕ್ಕಳು’ ಮತ್ತು ಮನು ನಿರ್ದೇಶನದ ‘ಆಂತರ್ಯ’ ಚಲನಚಿತ್ರಗಳು ಜನಪ್ರಿಯತೆ ಗಳಿಸಿವೆ.
ನಾ ಡಿಸೋಜಾ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ಸಾಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಅವರ ಪುತ್ರ ನವೀನ್ ಡಿಸೋಜಾ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರ ಸಂತಾಪ
ನಾ ಡಿ.ಸೋಜಾ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಹಿರಿಯ ನಾಯಕ ಬಿ,ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಡಿನ ಹಿರಿಯ ಸಾಹಿತಿ ನಾ.ಡಿಸೋಜಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ.ಡಿಸೋಜಾ ಅವರು ಜನಪರ ಕಾಳಜಿಯ ಲೇಖಕ. ನಾ.ಡಿಸೋಜಾ ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆಂದು ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಹಿರಿಯ ಸಾಹಿತಿ ಡಾ. ನಾ ಡಿಸೋಜ ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ವಿಶೇಷವಾಗಿ ಮಲೆನಾಡಿನ ಸೊಬಗು, ಸಂಸ್ಕೃತಿಗಳಿಗೆ ಅಕ್ಷರ ರೂಪ ನೀಡುತ್ತಿದ್ದ ನಾ ಡಿಸೋಜ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆಂದು ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪೋಸ್ಟ್ ಮಾಡಿ, ಕನ್ನಡ ಸಾರಸ್ವತ ಲೋಕದ ಬಹುದೊಡ್ಡ ಹೆಸರು, ಬಹುಮುಖ ಪ್ರತಿಭೆಯ ಬರಹಗಾರರು ಆಗಿದ್ದ ಡಾ.ನಾ ಡಿಸೋಜ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ಆರು ದಶಕಗಳ ಕಾಲ ಕನ್ನಡ ಸಾಹಿತ್ಯಸಿರಿಯನ್ನು ಶ್ರೀಮಂತಗೊಳಿಸಿದ ಶ್ರೀಯುತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಅನೇಕ ಪ್ರತಿಷ್ಠಿತ ಗೌರವಗಳಿಗೆ ಪಾತ್ರರಾಗಿದ್ದಾರೆ. ಮಂಜಿನ ಕಾನು, ಈ ನೆಲ ಈ ಜಲ, ನೆಲೆ, ಗಾಂಧಿ ಬಂದರು, ದ್ವೀಪ, ಜೀವಕಳೆ, ಚೆನ್ನಮ್ಮ ಚೆನ್ನಮ್ಮಾಜಿ, ಒಡ್ಡು ಸೇರಿ 40ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಅವರ ಕೊಡುಗೆ ಅನನ್ಯ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.



