kotekar

 

 

ಬೀದರ್ ಎಟಿಎಂ ದರೋಡೆ ಕೊಲೆ ಪ್ರಕರಣ ಬೆನ್ನಿಗೆಯೇ ಈಗ ಮಂಗಳೂರಿನಲ್ಲೂ ಅಂತಹುದೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದೆ, ಈ ಬಾರಿ ದುಷ್ಕರ್ಮಿಗಳು ಬರೊಬ್ಬರಿ 12 ಕೋಟಿ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾರೆ.

ನಿನ್ನೆ ಬೀದರ್ ನಲ್ಲಿ ಎಸ್ ಬಿಐ ಎಟಿಎಂ ಬಳಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಇಬ್ಬರು ಆಗಂತುಕರು ಸಿಎಂಎಸ್ ಸಂಸ್ಥೆಯ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿ ಸುಮಾರು 93 ಲಕ್ಷ ರೂ ಇದ್ದ ಹಣದ ಬಾಕ್ಸ್ ಅನ್ನು ಹೊತ್ತು ಪರಾರಿಯಾಗಿದ್ದರು. ಈ ಘಟನೆಯಲ್ಲಿ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿ ಮತ್ತೋರ್ವ ಸಿಬ್ಬಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಇನ್ನೂ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲೂ ಇಂತಹುದೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿ ಕೋಟೆಕಾರು ವ್ಯವಸಾಯ ಸಹಕಾರ ಬ್ಯಾಂಕ್ ಗೆ ಶುಕ್ರವಾರ ಮಧ್ಯಾಹ್ನ ಹಾಡಹಗಲೇ ನುಗ್ಗಿದ ಖದೀಮರ ಗುಂಪು ಸುಮಾರು 12 ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದಾರೆ. ಮೂಲಗಳ ಪ್ರಕಾರ ಒಟ್ಟು ಆರು ಜನರಿದ್ದ ದರೋಡೆಕೋರರ ತಂಡವು ಕೋಟೆಕಾರು ಬ್ಯಾಂಕ್  ಕೆ.ಸಿರೋಡು ಶಾಖೆಗೆ ನುಗ್ಗಿ, ಪಿಸ್ತೂಲು ಮತ್ತು ತಲವಾರು ತೋರಿಸಿ ಲೂಟಿ ಮಾಡಿದ್ದಾರೆ.

ಪೊಲೀಸರೆಲ್ಲ ಸಿಎಂ ಭದ್ರತೆಗೆ ತೆರಳಿದ್ದಾಗ ಘಟನೆ

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಅದರ ಭದ್ರತೆಗೆ ತೆರಳಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.

 

ಇಂದು ಶುಕ್ರವಾರವಾದ್ದರಿಂದ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕೆ.ಸಿ.ರೋಡು ಜಂಕ್ಷನ್‌ ನಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆ ಕಾರಣ ಜನಸಂಚಾರ ವಿರಳವಾಗಿತ್ತು. ಇದೇ ಸಮಯ ನೋಡಿಕೊಂಡು ದರೋಡೆಕೋರರ ಗುಂಪು ಬ್ಯಾಂಕ್‌ ಗೆ ದಾಳಿ ನಡೆಸಿದೆ. ಗ್ಯಾಂಗ್‌ ನಲ್ಲಿ ಆರು ಜನರಿದ್ದು, ಈ ಪೈಕಿ ಐವರು ಬ್ಯಾಂಕ್‌ ಗೆ ನುಗ್ಗಿದರೆ ಓರ್ವ ದುಷ್ಕರ್ಮಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಅವರಿಗಾಗಿ ಕಾದಿದ್ದ. ಬ್ಯಾಂಕ್ ನೊಳಗೆ ನುಗ್ಗಿದ ದುಷ್ಕರ್ಮಿಗಳು ಪಿಸ್ತೂಲು ಮತ್ತು ತಲವಾರು ತೋರಿಸಿ ಬ್ಯಾಂಕ್‌ ನಿಂದ ಸುಮಾರು 12 ಕೋಟಿ ರೂ ಮೌಲ್ಯದ ಹಣ ಮತ್ತು ಚಿನ್ನದ ಆಭರಣಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.

ಕೋಟೆ ಕಾರು ಬ್ಯಾಂಕ್ ಮೊದಲ ಮಹಡಿಯಲ್ಲಿತ್ತು. ಕೆಳಗೆ ಬೇಕರಿ ಒಂದಿದ್ದು, ದರೋಡೆ ಸಮಯದಲ್ಲಿ ಬೇಕರಿಯಲ್ಲಿ ಕೆಲ ವಿದ್ಯಾರ್ಥಿಗಳು ತಿಂಡಿ ತಿನ್ನುತ್ತಿದ್ದರು. ಬ್ಯಾಂಕ್ ನಿಂದ ಕೇಳಿಬಂದ ಗಲಾಟೆ ಕೇಳಿ ವಿದ್ಯಾರ್ಥಿಗಳು ಬ್ಯಾಂಕ್ ನತ್ತ ಓಡಿದ್ದು, ಈ ವೇಳೆ ದುಷ್ಕರ್ಮಿಗಳು ಅವರಿಗೆ ಪಿಸ್ತುಲು-ತಲವಾರು ತೋರಿಸಿ ಬೆದರಿಸಿ ಓಡಿಸಿದ್ದಾರೆ. ಆಗ ಕೆಳಗೆ ಬಂದ ವಿದ್ಯಾರ್ಥಿಗಳು ಜೋರಾಗಿ ಕೂಗಿ ಸ್ಥಳೀಯರನ್ನು ಕರೆದಿದ್ದಾರೆ. ಆದರೆ ಇದಾವುದನ್ನೂ ಲೆಕ್ಕಿಸದ ದುಷ್ಕರ್ಮಿಗಳು ಹಣ-ಚಿನ್ನಾಭರಣ ಹೊತ್ತು ತಾವು ತಂದಿದ್ದ ಫಿಯಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಮಂಗಳೂರು ನಗರದಾದ್ಯಂತ ನಾಕಾಬಂದಿ ಮಾಡಿ ದರೋಡೆಕೋರರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ದರೋಡೆಕೋರರು ಸುಮಾರು 20 ರಿಂದ 30 ವರ್ಷದ ವಯಸ್ಸಿನವರಾಗಿದ್ದು, ಹಿಂದಿಯಲ್ಲಿ ಪರಸ್ಪರ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ.

2ನೇ ಬಾರಿಗೆ ದರೋಡೆ

ಇನ್ನು ಇದೇ ಬ್ಯಾಂಕ್ ನಲ್ಲಿ ಈ ಹಿಂದೆಯೂ ದರೋಡೆ ಪ್ರಕರಣ ನಡೆದಿತ್ತು. ಕೆಲ ವರ್ಷಗಳ ಹಿಂದೆ ಇದೇ ಬ್ರ್ಯಾಂಚ್ ನಲ್ಲಿ ದರೋಡೆಯಾಗಿತ್ತು.‌ ಆಗ ಬ್ಯಾಂಕ್‌ ಬೇರೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಳಿಕ ನಡೆದ ತನಿಖೆಯಲ್ಲಿ ಆಗಿನ ಬ್ಯಾಂಕ್ ನಿರ್ದೇಶಕರ ಪತಿಯೇ ದರೋಡೆಯಲ್ಲಿ‌ ಶಾಮೀಲಾಗಿದ್ದ ವಿಚಾರ ಗೊತ್ತಾಗಿ ಆತನನ್ನು ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ