belegara 6_page-0001

 

 

ಮೂಡಿಗೆರೆ ಬೆಳೆಗಾರರ ಸಂಘದ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದ್ದು, ಬಹುತೇಕ ಏಪ್ರಿಲ್ ತಿಂಗಳಿನಲ್ಲಿ ಉದ್ಘಾಟನೆ ನೆರವೇರಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ತಿಳಿಸಿದ್ದಾರೆ.

ಅವರು ಭಾನುವಾರ ಸಂಘದ ನೂತನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬೆಳೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಹೃದಯಿ ದಾನಿಗಳ ನೆರವಿನಿಂದ ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿ ಸುಸಜ್ಜಿತವಾದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡದ ನೆಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಮೊದಲ ಮಹಡಿಯಲ್ಲಿ ಸಂಘದ ಆಡಳಿತ ಕಚೇರಿ, ಮೀಟಿಂಗ್ ಹಾಲ್ ನಿರ್ಮಿಸಿದ್ದು, ಎರಡನೇ ಮತ್ತು ಮೂರನೇ ಅಂತಸ್ತಿನಲ್ಲಿ ಸಭಾಂಗಣಗಳನ್ನು ನಿರ್ಮಾಣ ಮಾಡಲಾಗಿದೆ. ಕಟ್ಟದಲ್ಲಿ ಇನ್ನೂ ಬಹಳಷ್ಟು ಕೆಲಸ ಬಾಕಿಯಿದ್ದು ಅದನ್ನು ಪೂರ್ಣಗೊಳಿಸಲು ಬೆಳೆಗಾರರು ಕೈಜೋಡಿಸಬೇಕು. ಬೆಳೆಗಾರರ ಸಂಘವು ಸದಾ ಕಾಫಿ ಬೆಳೆಗಾರರು, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಇದೀಗ ತನ್ನದೇ ಸ್ವಂತ ಕಟ್ಟಡ ಹೊಂದುವ ಮೂಲಕ ಸಂಘದ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಇದು ಸಹಾಯಕವಾಗಲಿದೆ ಎಂದರು.

ಏಪ್ರಿಲ್ ತಿಂಗಳಿನಲ್ಲಿ  ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಎರಡು ದಿನಗಳ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವ ಚಿಂತನೆ ನಡೆಸಿದ್ದು, ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ಕಾಫಿ ಕುಟುಂಬದ ಹಬ್ಬದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಂಸದರು, ಸಚಿವರು, ಶಾಸಕರು, ಕಾಫಿ ಉದ್ದಿಮೆಗೆ ಸಂಬಂಧಿಸಿದ ಪ್ರಮುಖರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಕಾಫಿ ಉದ್ದಿಮೆಗೆ, ಮಲೆನಾಡಿನ ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ಕಾಫಿ ಉದ್ದಿಮೆ ಸಾಗಿ ಬಂದ ಹಾದಿಯ ಪರಿಚಯ ಮಾಡುವ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಹಳಸೆ ಶಿವಣ್ಣ ಮಾತನಾಡಿ ; ಮೂಡಿಗೆರೆ ಬೆಳೆಗಾರರ ಸಂಘದ  ಕಟ್ಟಡ ಬಹಳ ಆಕರ್ಷಕ ಮತ್ತು ಅದ್ದೂರಿಯಾಗಿ ಮೂಡಿಬಂದಿದ್ದು, ಮೂಡಿಗೆರೆ ಬೆಳೆಗಾರರ ಸಂಘಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮುಂದುವರಿದು ಇಂದು ಕಾಫಿ ಬೆಳೆಗಾರರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಯುವಕರು ಕಾಫಿ ತೋಟಗಳ ಕಡೆಗೆ ಆಸಕ್ತಿ ವಹಿಸುವಂತೆ ಮಾಡಲು ಉತ್ತೇಜನಕಾರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಿನ ದಿನಗಳಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ತನ್ನ ಸಹ ಸಂಘಟನೆಗಳ ಜೊತೆ ಸೇರಿ ಕೆಲಸ ಮಾಡಲಿದೆ. ಈಗ ಕಾಫಿಗೆ ಉತ್ತಮ ಬೆಲೆ ಬಂದಿದ್ದು, ಇದನ್ನು ಸದುಪಯೋಗಪಡಿಸಿಕೊಂಡು ಬೆಳೆಗಾರರು ಸಾಲಮುಕ್ತವಾಗುವ ಕಡೆಗೆ ಗಮನ ಹರಿಸಬೇಕು. ತೋಟದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ, ಮೂಡಿಗೆರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಕೆಜಿಎಫ್ ಕಾರ್ಯದರ್ಶಿ ಸುರೇಂದ್ರ, ಸಂಘಟನಾ ಕಾರ್ಯದರ್ಶಿ ಅಶೋಕ್ ಸೂರಪ್ಪನಹಳ್ಳಿ, ಅರ್ಕಿಟೆಕ್ಟ್ ಪ್ರಮೋದ್ ಕೆಂಜಿಗೆ, ಬಾಲರಾಜ್, ಓ.ಎಸ್.ಗೋಪಾಲಗೌಡ, ಹೆಚ್.ಆರ್. ಅಶೋಕ್,  ಎಂ.ಡಿ.ಜಯಪಾಲ್ ಮುಂತಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಬೆಳೆಗಾರರ ಸಂಘದ ಕಟ್ಟಡದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಹೋಮ ಹವನ, ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಿಸಲಾಯಿತು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ