ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದ ಬಿಳ್ಳೂರಿನ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿ 252 ರಸ್ತೆಯನ್ನು ನಿರ್ವಹಣೆ ಮಾಡುವುದರಲ್ಲಿ ಲೋಕೋಪಯೋಗಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥ್ ದೂರಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರಸ್ತೆಯ ಎರಡು ಭಾಗಗಳಲ್ಲಿ ದಾಖಲಿತ ರಸ್ತೆಯ ಭೂಗಡಿ, ಕಟ್ಟಡ ರೇಖೆ, ವಾಹನ ನಿಯಂತ್ರಣ ರೇಖೆ ಹಾಗೂ ರಸ್ತೆ ಘಟಕಗಳನ್ನು ಸ್ಪಷ್ಟವಾಗಿ ವಿವರಿಸಿದ್ದರೂ ಅಕ್ರಮವಾಗಿ ಕಟ್ಟಡಗಳು ತಲೆ ಎತ್ತಿವೆ. ಅಲ್ಲದೇ ವಿದ್ಯುತ್ ಕಂಬಗಳು ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಅಳವಡಿಸಲಾಗಿದೆ. ಇದರಿಂದ ವಾಹನಗಳು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುತ್ತಿದ್ದು, ವಾಹನ ಸವಾರರು ಹಾಗೂ ಪಾದಾಚಾರಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆಯ ವಿಸ್ತಾರ ಹಾಗೂ ಗಡಿ ಗುರುತು ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂದು ಹೇಳಿದರು.
ಈ ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೂ ಗುಣಾತ್ಮಕ ಕೆಲಸ ಆಗುತ್ತಿಲ್ಲ. 30 ವರ್ಷದ ಹಿಂದೆ ಪಟ್ಟಣದಲ್ಲಿ ಕಟ್ಟಿದ ಮಿನಿ ವಿಧಾನಸೌಧ ಸಂಪೂರ್ಣ ಶಿಥಿಲಗೊಂಡಿದೆ. ಈ ಹಿಂದೆ ಮರಳು ಗಣಿಗಾರಿಕೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿದ್ದು, ನದಿಯ ಆಳದಿಂದ ಗಣಿಗಾರಿಕೆ ಮಾಡಿದ್ದರಿಂದ ಅನೇಕ ಸೇತುವೆಗಳು ಮುರಿದು ಬಿದ್ದವು. ಈಗ ರಾಜ್ಯ ಹೆದ್ದಾರಿ 252 ರ ದಾಖಲಿತ ರಸ್ತೆಯ ಭೂಗಡಿ ರೇಖೆ, ಕಟ್ಟಡ ನಿಯಂತ್ರಣ ರೇಖೆಗಳನ್ನು ಗುರುತಿಸುವಲ್ಲಿ ಕ್ರಮ ವಹಿಸದೇ ಇರುವುದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ಪಿಡಬ್ಲೂಡಿ ಕಚೇರಿ ಮುಂದೆ ಧರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.



