naxal 4

 

 

ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಆರು ನಕ್ಸಲ್​ರು ಶರಣಾಗಿದ್ದರು. ಈ ವೇಳೆ ಶರಣಾಗದೆ ಉಳಿದಿದ್ದ ನಕ್ಸಲ್ ರವೀಂದ್ರ(ರವಿ) ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎದುರು ಶರಣಾಗಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರನ ಜತೆ ಮಾತುಕತೆ ನಡೆಸಿ ಮನವೊಲಿಸಿದ್ದು,   ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹಾಗೂ ಎಸ್​ಪಿ ವಿಕ್ರಮ್ ಆಮ್ಟೆ ಅವರ‌ ಮುಂದೆ ಶರಣಾಗುವಂತೆ ಮಾಡಿದ್ದಾರೆ.

ಕಳೆದ‌ 18 ವರ್ಷಗಳಿಂದ ಭೂಗತನಾಗಿದ್ದ ನಕ್ಸಲ್​ ರವೀಂದ್ರ ಅವರ ವಿರುದ್ಧ ಒಟ್ಟು 26 ಪ್ರಕರಣಗಳಿವೆ. ನಕ್ಸಲ್​ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ, 18 ವರ್ಷಗಳಿಂದ ನಕ್ಸಲ್​​ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. ನಕ್ಸಲ್​ರ ನಾಯಕ ವಿಕ್ರಮ್ ಗೌಡ ಎನ್​ಕೌಂಟರ್​ ಬಳಿಕ ರವೀಂದ್ರ ನಾಪತ್ತೆಯಾಗಿದ್ದ.

ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದು ಇದರೊಂದಿಗೆ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬೇರೂರಿದ್ದ ನಕ್ಸಲ್ ಚಟುವಟಿಕೆ, ಎರಡೂವರೆ ದಶಕಗಳ ರಕ್ತಸಿಕ್ತ ಅಧ್ಯಾಯ ಬಹುತೇಕ ಕೊನೆಗೊಂಡಂತಾಗಿದೆ.

ಶರಣಾದ ಪ್ರಕ್ರಿಯೆ ಪೂರ್ಣಗೊಂಡ ನಂತರ ನಕ್ಸಲ್ ರವೀಂದ್ರನನ್ನು ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ರವೀಂದ್ರನನ್ನು ಶೃಂಗೇರಿ ಜೆಎಂಎಫ್‌ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ತಿಳಿಸಿದ ಎಸ್ಪಿ ಡಾ.ವಿಕ್ರಮ ಅಮಟೆ ಅವರು, ನಂತರ ಆತನನ್ನು ವಶಕ್ಕೆ ಪಡೆದು ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆಗೊಳಪಡಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

2007 ರಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಪ್ರಕರಣಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ಹಾಗೂ ಹೊರ ರಾಜ್ಯಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.

7.5 ಲಕ್ಷ ರೂ. ಹಣ:

ಜಿಲ್ಲಾಡಳಿತದ ಎದುರು ಶರಣಾಗಿರುವ ನಕ್ಸಲ್ ರವೀಂದ್ರ ರಾಜ್ಯ ಸರ್ಕಾರದ ಶರಣಾಗತಿ ಪ್ಯಾಕೇಜ್‌ನ ಎ ವರ್ಗಕ್ಕೆ ಸೇರಿದ್ದು, ಆತನಿಗೆ 7.5 ಲಕ್ಷ ರೂ. ಹಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ನಕ್ಸಲ್ ಶರಣಾಗತಿ ಸಮಿತಿಯ ಜಿಲ್ಲಾಧ್ಯಕ್ಷರೂ ಆದೆ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

ನಕ್ಸಲ್ ರವೀಂದ್ರನ ಶರಣಾಗತಿ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತ್ವರಿತಗತಿಯಲ್ಲಿ ರವೀಂದ್ರ ಶರಣಾಗತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ತಕ್ಷಣ ಪ್ರಸ್ತಾವನೆಯನ್ನು ರಾಜ್ಯ ಸಮಿತಿಗೆ ಕಳಿಸಲಾಗುವುದು ಅಲ್ಲಿಂದ ಅನುಮತಿ ಸಿಕ್ಕ ತಕ್ಷಣಕ್ಕೆ ರವೀಂದ್ರ ಅವರ ಖಾತೆಗೆ 3 ಲಕ್ಷ ರೂ. ಹಣ ಜಮಾ ಮಾಡಲಾಗುವುದು. ಉಳಿದ ಹಣವನ್ನು ಮುಂದಿನ ಎರಡು ಕಂತುಗಳಗಲ್ಲಿ ನೀಡಲಾಗುವುದು ಎಂದು ಹೇಳಿದರು.

ಆತ ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗೆ ದಾಖಲಾದ ನಂತರ ಎರಡು ವರ್ಷಗಳವರೆಗೆ ಪ್ರತಿ ತಿಂಗಳಿಗೆ 5 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗುದು ಹಾಗೂ ಔಪಚಾರಿಕ ಶಿಕ್ಷಣ ಪಡೆಯಲು ಎರಡು ವರ್ಷಗಳ ವರೆಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದರು.

ಇತ್ತೀಚಿಗೆ ಮುಖ್ಯಮಂತ್ರಿಗಳ ಎದುರು ಶರಣಾಗಿರುವ ಆರು ಮಂದಿ ನಕ್ಸಲೀಯರಿಗೂ ಮೊದಲ ಕಂತಿನ ಹಣವನ್ನು ಅವರ ಖಾತೆಗೆ ಈಗಾಗಲೇ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ನಕ್ಸಲೀಯರು ಮುಂದಿಟ್ಟಿರುವ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಿ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ ಹಕ್ಕು ಪತ್ರ, ವಿದ್ಯುತ್, ಕುಡಿಯುವ ನೀರು, ಮನೆಗಳ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ನಕ್ಸಲ್ ಶರಣಾಗತಿ ಸಮಿತಿ ಅಧ್ಯಕ್ಷರೂ, ಜಿಲ್ಲಾಧಿಕಾರಿಗಳೂ ಆದ ಸಿ.ಎನ್.ಮೀನಾ ನಾಗರಾಜು, ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಶರಣಾಗತಿ ಸಮಿತಿ ಸದಸ್ಯರಾದ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರೀಕ ಹೋರಾ ಸಮಿತಿ ಸದಸ್ಯರುಗಳಾದ ಕೆ.ಎಲ್.ಅಶೋಕ್ ನಗರಗೆರೆ ರಮೇಶ್, ವಿ.ಎಸ್.ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ