ಹೊಲಿಗೆ ಕಾರ್ಮಿಕರ ಹಿತರಕ್ಷಣೆಗಾಗಿ ರಾಜ್ಯಮಟ್ಟದ ಟೈಲರ್ಸ್ ಮಂಡಳಿ ಸ್ಥಾಪಿಸಬೇಕೆಂದು ಕೆಎಸ್‍ಟಿಎ ಆಗ್ರಹಿಸಿದೆ ಎಂದು ಉಪಾಧ್ಯಕ್ಷ ಸಯ್ಯದ್ ರೆಹಮಾನ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಮಿತಿ ಸಹಯೋಗದೊಂದಿಗೆ ನಗರದ ಶ್ರೀರಾಮ ದೇವಸ್ಥಾನದ ಜಾನಕಿ ಸಭಾಂಗಣದಲ್ಲಿ ರಾಜ್ಯ ಸಮಿತಿ ಸಾಮಾನ್ಯ ಸಭೆಯಲ್ಲಿಂದು ಹೊಲಿಗೆ ಕಾರ್ಮಿಕರ ಸಮಸ್ಯೆಗಳ ಕುರಿತಂತೆ ಸುದೀರ್ಘವಾಗಿ ಚರ್ಚಿಸಿತು.
ಕೆಎಸ್‍ಟಿಎ ಕೇಂದ್ರ ಸಮಿತಿ ಅಧ್ಯಕ್ಷ ಬಿ.ಎ.ನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಲಿಗೆ ಕಾರ್ಮಿಕರಲ್ಲಿ ಬಹುತೇಕರು ಮಹಿಳೆಯರಿದ್ದಾರೆ. ಅವರ ಹಿತರಕ್ಷಣೆಗಾಗಿ ಸರ್ಕಾರ ಮುಂದಾಗಬೇಕು. ವಿಶೇಷವಾಗಿ ಹೆರಿಗೆಭತ್ಯೆ, ಆರೋಗ್ಯ ಸೌಕರ್ಯ, ವಿಧವಾವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಅನುಕೂಲವಾಗುವಂತೆ ಟೈಲರ್ಸ ಮಂಡಳಿ ರಚನೆಗೊಳ್ಳಬೇಕೆಂದು ಬೆಂಬಲಿಸಿದರು.
60ವರ್ಷ ದಾಟಿದ ಹೊಲಿಗೆ ಕಾರ್ಮಿಕರಿಗೆ ದೃಷ್ಟಿದೋಷ ಸಹಜವಾಗಿ ಬರುತ್ತದೆ. ದೀರ್ಘಕಾಲದ ಕಾರ್ಯನಿರ್ವಹಣೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಕುಗ್ಗಿರುತ್ತದೆ. ಜೀವನಪೂರ್ತಿ ಅಂದಚಂದದ ವಸ್ತ್ರವಿನ್ಯಾಸದಲ್ಲಿ ತೊಡಗಿಸಿಕೊಂಡವರ ಬದುಕು ಅಸಹನೀಯವಾಗಬಾರದು. ಕಟ್ಟಡಕಾರ್ಮಿಕ ಮಂಡಳಿಯ ಮಾದರಿಯಲ್ಲೆ ಹೊಲಿಗೆ ಕಾರ್ಮಿಕರ ನೆರವಿಗಾಗಿ ರಾಜ್ಯಸರ್ಕಾರ ಪ್ರತ್ಯೇಕ ಮಂಡಳಿ ರಚಿಸಬೇಕೆಂಬುದು ಬಹುದಿನಗಳ ಬೇಡಿಕೆ ಎಂದ ನಾರಾಯಣ್, ರಾಜ್ಯದಲ್ಲಿ 1.2ಲಕ್ಷಕ್ಕೂ ಅಧಿಕ ಹೊಲಿಗೆ ಕಾರ್ಮಿಕರು ಕೆಎಸ್‍ಟಿಎಯಲ್ಲಿ ಸದಸ್ಯತ್ವ ಹೊಂದಿದ್ದಾರೆ ಎಂದರು.
1999ರಲ್ಲಿ ಮಂಗಳೂರಿನಲ್ಲಿ ನೊಂದಾಣೆಗೊಂಡ ಕೆಎಸ್‍ಟಿಎ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲೂ ಘಟಕಗಳನ್ನು ಹೊಂದಿದೆ. ಪ್ರತಿ ಸದಸ್ಯರಿಂದ 45ರೂ.ಸದಸ್ಯತ್ವ ಶುಲ್ಕ ಸಂಗ್ರಹಿಸುತ್ತಿದ್ದು ಅದರಲ್ಲಿ ಕೇವಲ 8ರೂ.ಮಾತ್ರ ರಾಜ್ಯ ಸಂಘ ಪಡೆದು ಉಳಿದ ಹಣವನ್ನು ತಾಲ್ಲೂಕು ಮತ್ತು ಜಿಲ್ಲಾ ಸಂಘಕ್ಕೆ ಬಿಟ್ಟು ಕೊಡುತ್ತಿದೆ. ಶುಲ್ಕ ಹಾಗೂ ದಾನಿಗಳ ನೆರವಿನೊಂದಿಗೆ ಮಂಗಳೂರಿನಲ್ಲಿ 40ಇಂಟು60 ವಿಸ್ತೀರ್ಣದಲ್ಲಿ ನಾಲ್ಕುಅಂತಸ್ತಿನ ಬೃಹತ್ ಕಟ್ಟಡವನ್ನು ಕಟ್ಟಿದೆ. ಶ್ರಮಿಕರ ಪ್ರತಿ ಪೈಸೆಯೂ ಸದ್ವಿನಿಯೋಗಗೊಳ್ಳುತ್ತಿದೆ ಎಂದು ನಾರಾಯಣ ನುಡಿದರು.
ರಾಜ್ಯ ಪ್ರಧಾನಕಾರ್ಯದರ್ಶಿ ಪ್ರಜ್ವಲಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಹೊಲಿಗೆ ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಶ್ರಮಿಸಲಾಗುತ್ತಿದೆ. ಕಳೆದವರ್ಷ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರನ್ನು ಆಹ್ವಾನಿಸಿ ಸದಸ್ಯರ ಬೇಡಿಕೆಗಳನ್ನು ಮನವರಿಕೆ ಮಾಡಲಾಗಿದೆ. ಆದರೆ ಈವರೆಗೂ ಅವು ಈಡೇರಿಲ್ಲ ಎಂದು ವಿಷಾದಿಸಿ ಮುಂಬರುವ ದಿನಗಳಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತದೆಂಬ ಭರವಸೆ ಇದೆ ಎಂದರು.
ರಾಜ್ಯ ಉಪಾಧ್ಯಕ್ಷ ಸಯ್ಯದ್ ರೆಹಮಾನ್ ಮಾತನಾಡಿ ಟೈಲರ್‍ಗಳು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಬೇಕು. ಒಕ್ಕೊರಲಿನ ಧ್ವನಿಗೆ ಬಲ ಬರುತ್ತದೆ. ಕ್ಷೇತ್ರಮಟ್ಟದಲ್ಲಿ ಸಂಘವನ್ನು ಬಲಪಡಿಸಬೇಕು. ಗುರುತಿನಚೀಟಿಗಳನ್ನು ಸಮರ್ಪಕವಾಗಿ ಹಂಚಿಕೆಯಾಗಬೇಕು ಎಂದ ಅವರು, ರಾಜ್ಯಸರ್ಕಾರ ಹೊಲಿಗೆಕಾರ್ಮಿಕರ ಹಿತರಕ್ಷಣೆಗಾಗಿ ರಾಜ್ಯಮಟ್ಟದ ಪ್ರತ್ಯೇಕವಾಗಿ ಟೈಲರ್ ಮಂಡಳಿಯನ್ನು ರಚಿಸಬೇಕೆಂಬ ನಿರ್ಣಯಮಂಡಿಸಿದ್ದು ಸಭೆ ಅನುಮೋದಿಸಿತು.
ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಪ್ರಭಾಕರ ಮತ್ತು ಶಶಿಕಲಾ ಮಾತನಾಡಿ ಎಲ್ಲ ಹೊಲಿಗೆಕಾರ್ಮಿಕರು ನೊಂದಣಿಗೊಂಡು ಗುರುತಿನಚೀಟಿಯನ್ನು ಇಲಾಖೆಯಿಂದ ಪಡೆದರೆ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದೆಂದರು.
ರಾಜ್ಯಸಂಘದ ಖಜಾಂಚಿ ರಾಮಣ್ಣ, ಉಪಾಧ್ಯಕ್ಷ ಸುರೇಶ್‍ಸಾಲ್ಯಾನ, ಹಾಸನ ಜಿಲ್ಲಾಧ್ಯಕ್ಷ ಎಂ.ಕೃಷ್ಣಪ್ಪ, ಮಾಜಿರಾಜ್ಯಕಾರ್ಯದರ್ಶಿ ಹಾಸನ ಮಲ್ಲಿಕಾರ್ಜುನ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯಪುರ ಸುರೇಂದ್ರ, ಪ್ರಧಾನಕಾರ್ಯದರ್ಶಿ ಎ.ವಿ.ಬಾಲಕೃಷ್ಣ, ಖಜಾಂಚಿ ಎಂ.ಸೌಮ್ಯ, ಮಂಗಳೂರು ಜಿಲ್ಲಾಧ್ಯಕ್ಷೆ ವಿದ್ಯಾಶೆಟ್ಟಿ, ಚಿಕ್ಕಮಗಳೂರು ಕ್ಷೇತ್ರ ಸಮಿತಿ ಪ್ರಧಾನಕಾರ್ಯದರ್ಶಿಎಚ್.ಶಶಿಧರ್, ಖಜಾಂಚಿ ಚಂದ್ರಕುಮಾರ್, ಮೂಡಿಗೆರೆ ಕ್ಷೇತ್ರ ಕಾರ್ಯದರ್ಶಿ ಸತೀಶ್, ತರೀಕೆರೆ ಕ್ಷೇತ್ರಸಮಿತಿ ಅಧ್ಯಕ್ಷ ರಮೇಶ್, ಶೃಂಗೇರಿ ಕ್ಷೇತ್ರಸಮಿತಿ ಅಧ್ಯಕ್ಷ ಎನ್.ಜಿ.ರವೀಂದ್ರ, ಕಡೂರು ಕ್ಷೇತ್ರಸಮಿತಿ ಅಧ್ಯಕ್ಷೆ ಕುಮಾರಿ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ಸ್ವಾಗತಿಸಿ, ರೆಹಮಾನ್ ವಂದಿಸಿದರು. ಬೆಂಗಳೂರು, ಹಾಸನ, ಉಡುಪಿ ಮಂಗಳೂರು, ಸಕಲೇಶಪುರ, ಶಿರಸಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



