ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ 11 ವರ್ಷದಿಂದ ನಡೆಸಿದ ಆಡಳಿತಕ್ಕೆ ಜನರಿಂದ ಮನ್ನಣೆ ಸಿಕ್ಕಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಎಸ್.ರಘು ತಿಳಿಸಿದರು.
ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ದೇಶ ಬಲಿಷ್ಠವಾಗಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಜನ ಬಿಜೆಪಿಯನ್ನು ಎಲ್ಲಾ ರಾಜ್ಯಗಳಲ್ಲಿ ಅಧಿಕಾರಕ್ಕೆ ತರುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರ ದುರಾಡಳಿತವನ್ನು ಜನ ತಿರಸ್ಕರಿಸಿದ್ದಾರೆ. 70 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಜನರಿಂದ ತಿರಸ್ಕೃತವಾಗಿದೆ.
ಕರ್ನಾಟಕದಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಲು ಕಾಂಗ್ರೆಸ್ ಸೋಲಿನ ಭಯದಿಂದ ಹಿಂದೇಟು ಹಾಕುತ್ತಿದೆ. ನ್ಯಾಯಾಲಯದ ನಿರ್ದೇಶನದಂತೆ ಜಿಪಂ, ತಾಪಂ ಚುನಾವಣೆ ನಡೆಸುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬೇಕಾಗಿದೆ. ಚುನಾವಣೆ ನಡೆದರೆ ಬಿಜೆಪಿ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಭೂತಪೂರ್ವ ಸಾಧನೆ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಳ ಒಪ್ಪಂದದಿಂದ ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸಲು ನಡೆಸಿದ ಎಲ್ಲಾ ಪ್ರಯತ್ನವನ್ನು ಜನ ತಿರಸ್ಕರಿಸಿದ್ದಾರೆ. ಬಿಜೆಪಿಯ ಪ್ರಾಮಾಣಿಕತೆಗೆ ದೆಹಲಿಯ ಮತದಾರರು ಮನ್ನಣೆ ನೀಡಿದ್ದಾರೆ. ದೆಹಲಿಯ ಗೆಲುವಿನಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಮತ್ತಷ್ಟು ಬಲಬಂದಂತಾಗಿದೆ. ಈ ಗೆಲುವಿನಿಂದ ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಾಗಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಕಾಂಗ್ರೆಸಿನ ಗ್ಯಾರೆಂಟಿ ಯೋಜನೆಯಿಂದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ. ಭ್ರಷ್ಟಾಚಾರ ಮಿತಿಮೀರಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದ್ದು ಸದ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಪಪಂ ಸದಸ್ಯೆ ಕಮಲಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಮುಖಂಡರಾದ ಪರೀಕ್ಷಿತ್ ಜಾವಳಿ, ಕೊಣಗೆರೆ ಸುಂದರೇಶ್, ಪ್ರಶಾಂತ್, ಶಶಿ, ರಂಗನಾಥ್, ಸುನಿಲ್, ಸಾಗರ್, ಮೋಹನ್,ಶ್ರೀಜಿತ್, ಪದ್ಮಣ್ಣ, ರಾಕೇಶ್ ಇತರರಿದ್ದರು.



