ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪ ಕೆರೆಯಲ್ಲಿ ಮುಳುಗಿ ಕಾರ್ಮಿಕ ಯುವತಿ ಕೊನೆಯುಸಿರೆಳೆದಿರುವ ಘಟನೆ ನಡೆದಿದೆ.
ಆಲ್ದೂರು ಸಮೀಪದ ಅಗಳ ಗ್ರಾಮದ ಬಿಳಿಗಿರಿ ಎಸ್ಟೇಟ್ ನಲ್ಲಿ ಯುವತಿ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ರಂಜಿತಾ (20 ವರ್ಷ) ಸಾವನ್ನಪ್ಪಿರುವ ಯುವತಿ.
ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಶೇಖರ್ ನಾಯಕ್ ಎಂಬುವವರ ಪುತ್ರಿ ರಂಜಿತಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ತೋಟದ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಂದಿ ಗ್ರಾಮದ ಧರ್ಮಸ್ಥಳ ಶೌರ್ಯವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ರಾಕೇಶ್, ಅಭಿಲಾಷ್ ಯುವತಿಯ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಅವರಿಗೆ ಪ್ರಶಾಂತ್, ಪ್ರತಾಪ್, ಸಂದೀಪ್ ಸಾಥ್ ನೀಡಿದ್ದರು.
ಮೃತ ಯುವತಿಯ ತಂದೆ ಶೇಖರ್ ನಾಯಕ್ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



