ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಕೇಂದ್ರದಲ್ಲಿ ರಸ್ತೆ ಅಗಲೀಕರಣಗೊಂಡಿದೆ. ಆದರೆ ಮೂಡಿಗೆರೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಡಿ.ಎಸ್.ರಮೇಶ್ ಗೌಡ ದೂರಿದರು.
ರಸ್ತೆ ಅಗಲೀಕರಣಕ್ಕೆ ಕೂಡಲೇ ಚಾಲನೆ ನೀಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಪಟ್ಟಣದಲ್ಲಿ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ರಸ್ತೆ ತಡೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಈ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ತಾಲೂಕಿನಲ್ಲಿ ವಾಹನಗಳ ಸಂಖ್ಯೆ ಕೂಡ ಅಧಿಕಗೊಂಡಿದೆ. ಇದರಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಪಾದಾಚಾರಿಗಳು ಜೀವ ಭಯದಲ್ಲಿ ತಿರುಗಾಡುವಂತಾಗಿದೆ. ಹಾಗಾಗಿ ಇದಕ್ಕೆ ಶಾಶ್ವತ ಪರಿಹಾರಕ್ಕೆ ರಸ್ತೆ ಅಗಲೀಕರಣ ಆಗಲೇಬೇಕೆಂದು ಒತ್ತಾಯಿಸಿದರು.
ಕಸಾಪ ಅಧ್ಯಕ್ಷ ಲಕ್ಷ್ಮಣ್‍ಗೌಡ ಮಾತನಾಡಿ, ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲ. ಪ.ಪಂ. ವ್ಯಾಪ್ತಿಯ ಹಾಗೂ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಕೂಡ ಕಿರಿದಾಗಿದೆ. ಇದರಿಂದ ತಾಲೂಕಿನ ವಾಹನ ಚಾಲಕರಿಗೆ ನಿತ್ಯ ಗೋಳಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನಾದರೂ ಅಗಲೀಕರಣಗೊಳಿಸಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಇನ್ನಷ್ಟು ತೀರ್ವಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ರೈತ ಮುಖಂಡರಾದ ದಯಾಕರ್, ಪುಟ್ಟಸ್ವಾಮಿಗೌಡ, ವನಶ್ರೀ, ಚಂದ್ರೇಗೌಡ, ಕರವೇ ತಾಲೂಕು ಅಧ್ಯಕ್ಷ ವಿನೋಧ್ ಬಿದರಹಳ್ಳಿ, ಜಿಲ್ಲಾ ಕಾರ್ಯದರ್ಶಿ ಇದ್ರೀಶ್, ಬಣಕಲ್ ಹೋಬಳಿ ಅಧ್ಯಕ್ಷ ಅಶ್ರಫ್, ಹೊರಟ್ಟಿ ರಘು, ಇಬ್ರಾಹಿಂ, ಬಾಲುಶೆಟ್ಟಿ, ಅಭಿಜಿತ್ ಹೆಡದಾಳ್, ಗಣೇಶ್ ಮತ್ತಿತರರಿದ್ದರು.



