ಚಿಕ್ಕಮಗಳೂರು ಪೊಲೀಸ್ ಇಲಾಖೆಯಿಂದ ಪ್ರತಿಭಾವಂತ ಪೊಲೀಸ್ ಮಕ್ಕಳಿಗೆ ಪ್ರೋತ್ಸಾಹ ಧನ ಮತ್ತು ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು.
2023-24 ನೇ ಸಾಲಿನಲ್ಲಿ SSLC ಮತ್ತು PUC ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಒಟ್ಟು 43 ಮಕ್ಕಳಿಗೆ ಪೊಲೀಸ್ ಸಹಕಾರ ಸಂಘದ ವತಿಯಿಂದ ಇಂದು ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರು ಪ್ರೋತ್ಸಾಹ ಧನ ಮತ್ತು ಪ್ರಶಂಸನಾ ಪತ್ರಗಳನ್ನು ವಿತರಿಸಿ, ಮುಂದಿನ ಜೀವನದಲ್ಲಿ ಯಶಸ್ಸು ಸಾಧಿಸಲು ಶುಭ ಹಾರೈಸಿದರು.
ಇದಲ್ಲದೇ 2024-25 ನೇ ಶೈಕ್ಷಣಿಕ ವರ್ಷದಲ್ಲಿ SSLC ಇಂದ ಉನ್ನತ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಒಟ್ಟು 53 ಮಕ್ಕಳಿಗೆ ಪ್ರೋತ್ಸಾಹ ನೀಡಲು ಅವರ ವಿದ್ಯಾಭ್ಯಾಸಕ್ಕಾಗಿ ಪೊಲೀಸ್ ಇಲಾಖೆಯ ವಿದ್ಯಾನಿಧಿ ಯೋಜನೆಯಡಿಯಲ್ಲಿ ಸಹಾಯ ಧನ ಮತ್ತು ಪ್ರಶಂಸನಾ ಪತ್ರಗಳನ್ನು ಸಹ ನೀಡಲಾಯಿತು.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಉನ್ನತ ಅಧ್ಯಯನ, ಮೌಲ್ಯಾಧಾರಿತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ಸಲುವಾಗಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಂದು ಕಾರ್ಯಾಗಾರ ಏರ್ಪಡಿಸಲಾಗಿತ್ತು. ನಾಗರಾಜ್ ರಾವ್ ಕಲ್ಕಟ್ಟೆ, ಪ್ರಾಂಶುಪಾಲರು, ಸರ್ಕಾರಿ ಪಿಯು ಕಾಲೇಜ್, ಕಳಸಾಪುರ ರವರು ಪ್ರೇರಕ ಭಾಷಣಕಾರರಾಗಿ ಆಗಮಿಸಿ ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ಪ್ರಸ್ತುತಪಡಿಸಿದರು. ಸಮಾಜದಲ್ಲಿ ಉತ್ತಮ ಸಾಧನೆಗಾಗಿ ಮಕ್ಕಳಲ್ಲಿ ಗುರಿ, ಉತ್ತಮ ಹವ್ಯಾಸಗಳು, ಬದುಕಿನ ದೃಷ್ಟಿಕೋನದಲ್ಲಿ ಬದಲಾವಣೆ, ಶಿಕ್ಷಣದ ಮಹತ್ವ, ಯಶಸ್ಸಿನ ಮೆಟ್ಟಿಲುಗಳು, ಸ್ವಾಭಾವಿಕ ಸಿದ್ಧಾಂತ ಇತ್ಯಾದಿ ಧನಾತ್ಮಕ ವಿಚಾರಗಳನ್ನು ವಿವರಿಸಿದರು.
ಡಾ. ವಿಕ್ರಮ ಅಮಟೆ, ಐಪಿಎಸ್, ಪೊಲೀಸ್ ಅಧೀಕ್ಷಕರವರು ಮಕ್ಕಳಲ್ಲಿ ದೃಢ ಆತ್ಮವಿಶ್ವಾಸ, ಉತ್ತಮ ನಡವಳಿಕೆ, ಸಮಾಜ ಸೇವೆ, ಮಾನವೀಯ ಮೌಲ್ಯ ಮತ್ತು ತತ್ವಗಳು, ಸಾಮಾಜಿಕ ಕಳಕಳಿ, ಪೋಷಕರಿಗೆ ಗುರು ಹಿರಿಯರಿಗೆ ಗೌರವ, ಬದುಕಿನಲ್ಲಿ ಧನಾತ್ಮಕತೆ, ಯಶಸ್ಸು ಸಾರ್ಥಕತೆ ವಿಚಾರಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿ ಪ್ರೋತ್ಸಾಹಿಸಿದರು.



