ತಾನು ಕಾಫಿ ಕಣದಲ್ಲಿದ್ದ ಸಂದರ್ಭದಲ್ಲಿ ಜಮೀನು ವಿಚಾರವಾಗಿ ಪಕ್ಕದ ತೋಟದ ಮಾಲೀಕರು ಹಾಗೂ ಅವರ ಜತೆ ಕೆಲವರು ಅಕ್ರಮವಾಗಿ ನನ್ನ ಕಣಕ್ಕೆ ಅತಿಕ್ರಮಣ ಪ್ರವೇಶಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಮೀನಾಮೇಷ ಹಾಕುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಎಂ. ಮಂಜುನಾಥ್‍ಗೌಡ ದೂರಿದರು.
ಅವರು ಶನಿವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ತಾಲ್ಲೂಕು ಕಡಿದಾಳು ಗ್ರಾಮದ ಬಿಳ್ಳೂರಿನಲ್ಲಿರುವ ಪಕ್ಕದ ಜಮೀನಿನಲ್ಲಿ ಕಾಫಿ ಗಿಡಗಳನ್ನು ಕಡಿದಿದ್ದೀರೆಂದು ನಿಮ್ಮ ವಿರುದ್ಧ ದೂರು ಬಂದಿದೆ. ವಿಚಾರಣೆಗೆ ಬರಬೇಕೆಂದು ಫೆ.2ರಂದು ಬಣಕಲ್ ಪೊಲೀಸರು ತಿಳಿಸಿದರು. ತಾನು ಕಾಫಿ ಗಿಡ ಕಡಿದ ಸ್ಥಳಕ್ಕೆ ಕೂಡಲೆ ತೆರಳಿ ವೀಕ್ಷಿಸಿದೆ. ಆದರೆ ತನ್ನ ಜಮೀನಿನಲ್ಲಿಯೇ ಗಿಡ ಕಡಿಯಲಾಗಿತ್ತು. ಈ ಬಗ್ಗೆ ತಾನು ಮರುದಿನ ಪೊಲೀಸರ ವಿಚಾರಣೆ ಹಾಗೂ ತನ್ನ ಜಮೀನಿನಲ್ಲಿ ಕಾಫಿ ಗಿಡ ಕಡಿದವರ ವಿರುದ್ಧ ದೂರು ಕೊಡಲು ಹೋಗಿದ್ದೆ. ಆದರೆ ಪಿಎಸ್‍ಐ ಇರಲಿಲ್ಲ. ಅಲ್ಲಿರುವ ಪೊಲೀಸು ನಾಳೆ ಬನ್ನಿ ಎಂದು ಕಳುಹಿಸಿದರು ಎಂದು ಹೇಳಿದರು.
ಮರುದಿನ ನಾನು ಕಾಫಿ ಕಣದಲ್ಲಿದ್ದ ಸಂದರ್ಭದಲ್ಲಿ ಪಕ್ಕದ ತೋಟದ ಮಾಲೀಕ ಮತ್ತು ಅವರ ಜತೆ ಬಂದಿದ್ದ ಕೆಲವರು ಅಕ್ರಮವಾಗಿ ನಮ್ಮ ಕಣಕ್ಕೆ ನುಗ್ಗಿದ್ದಲ್ಲದೇ ಮಾರಾಣಾಂತಿಕ ಹಲ್ಲೆ ನಡೆಸಿದರು. ಇದರಿಂದ ತಾನು ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಾಗಿದ್ದೆ. ಅಲ್ಲಿಗೆ ಪೊಲೀಸರು ಬಂದು ತನ್ನ ಹೇಳಿಕೆ ವೀಡಿಯೋ ಮಾಡಿ, ನಂತರ ಬರವಣಿಗೆ ಮಾಡಿಕೊಂಡರು. ತನ್ನ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ಹೆಸರು ಹೇಳಿದ್ದರೂ, ಅವರ ಹೆಸರನ್ನು ಬಿಟ್ಟು ಎಫ್‍ಐಆರ್ ಮಾಡಿದ್ದಾರೆ. ಪೊಲೀಸರು ಈ ಕ್ರಮ ವಿರೋಧಿಸಿ ಹಾಗೂ ತನಗಾಗಿರುವ ನ್ಯಾಯಕ್ಕಾಗಿ ಫೆ.17ರಂದು ಚಿಕ್ಕಮಗಳೂರು ಎಸ್‍ಪಿ ಕಚೇರಿ ಎದರು ಏಕಾಂಗಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ಎಚ್.ಡಿ.ಪೂರ್ಣೇಶ್ ಉಪಸ್ಥಿತರಿದ್ದರು.



