ಡಿವಿಜಿಯವರ ಮಂಕುತಿಮ್ಮನ ಕಗ್ಗ

ನಿರೂಪಣೆ : ಡಾ. ಸುಧಾ ಹೆಚ್.ಎಸ್
ಸಂಸ್ಕøತ ಉಪನ್ಯಾಸಕರು,
ಮೈಸೂರು.
ಮೊ. 9448233119
ಜೀವನ ಎಂಬುದು ಚಕ್ರೋಪಾದಿಯಲ್ಲಿ ಸುತ್ತುತ್ತಾ ತನ್ನೊಡಲೊಳಗೆ ಜನನ, ಮರಣ ಹಾಗೂ ಹುಟ್ಟು ಸಾವಿನ ಮಧ್ಯದ ಸ್ಥಿತಿಗತಿಗಳನ್ನು ಅಡಗಿಸಿಕೊಂಡಿದ್ದು ಅದರ ಆದಿ ಅಂತ್ಯದ ಸುಳಿವನ್ನು ಯಾರಿಗೂ ಬಿಟ್ಟು ಕೊಡದೆ ತಾನು ಗುಟ್ಟಾಗಿಯೇ ಇಟ್ಟುಕೊಂಡಿದೆ.
ಚಕ್ರದ ನಡುವೆ ತಿರುಗಾಣಿಯಂದದಿ ತಿರುಗುವ ಬದುಕು ಮನುಜನದು. “ಜಗವೇ ನಾಟಕ ರಂಗ” ಎಂಬ ದಾಸರವಾಣಿಯಂತೆ ಈ ಜೀವನವೆಂಬ ನಾಟಕದ ಪಾತ್ರಧಾರಿಗಳು ನಾವಾದರೆ ಸೂತ್ರಧಾರ ಕಣ್ಣಿಗೆ ಕಾಣಿಸಿಕೊಳ್ಳದೆ ನಮ್ಮೆಲ್ಲರನ್ನು ಆಡಿಸುತ್ತಿದ್ದಾನೆ. ಜಗತ್ತಿನ ನಾಟಕದ ಪಾತ್ರಧಾರಿಗಳಾದ ನಾವು ಇದರ ಮರ್ಮವನ್ನು ಅರಿಯದೇ ನಾನು-ನನ್ನದು-ನಮ್ಮವರು-ತಮ್ಮವರು ಎಂಬ ಜಂಜಾಟದ ಬಲೆಯಲ್ಲಿ ಸಿಲುಕಿದ್ದೇವೆ, ಈ ಬಲೆಯಿಂದ ಕಳಚಿಕೊಳ್ಳಲು ಬಾರದೇ ಸುಖ-ದುಃಖಗಳನ್ನು ಅನುಭವಿಸುತ್ತಾ ಇದಕ್ಕೆ ನಾವೇ ಹೊಣೆಗಾರರೆಂಬ ಭ್ರಮೆಯಲ್ಲಿ ಸಿಲುಕಿದ್ದೇವೆ. ಇಂತಹ ತೊಳಲಾಟಗಳ ನಡುವೆಯೂ ಸಹ ನಾವು ಇದರ ಗುಟ್ಟನ್ನು ಅರಿಯಬೇಕೆಂಬೆಡೆ ಗಮನ ಹರಿಸದೇ ಕೇವಲ ಸ್ವಾರ್ಥದ ಬದುಕನ್ನು ನನ್ನದೆಂಬಂತೆ ಅಪ್ಪಿಕೊಂಡು ಬದುಕುತ್ತಿದ್ದೇವೆ.
ಒಂದೊಮ್ಮೆ ನಾವು ಈ ಜೀವನದ ಮರ್ಮ ಇಷ್ಟೇ ಎಂದು ಅರಿತಿದ್ದೇ ಆದರೆ ಆ ಪರಮ ಸತ್ಯದ ಅರಿವಾದೊಡನೆ ನಾವು ಆಧ್ಯಾತ್ಮನೆಡೆಗೆ ಹೊರಳಿ ಸ್ಥಿತಪ್ರಜ್ಞತೆಯಿಂದ ಬದುಕಬಲ್ಲೆವು, ಆದರೆ ಇಂತಹ ಅರಿವು ಮೂಡುವುದು ಕಷ್ಟಸಾಧ್ಯವಾದ ಮಾತು ಎಂಬುದಂತು ಕಟು ಸತ್ಯ. ಈ ಜೀವನದ ತತ್ವಸಾರವನ್ನು ಹುಲುಮಾನವರಾದ ನಾವು ಅರಿಯಬೇಕೆಂದಾದಲ್ಲಿ ನಾವು ಸಾಧಕರಾಗಬೇಕೇ ಹೊರತು ಅನ್ಯಮಾರ್ಗವಿಲ್ಲ. ಈ ಸಾಧನೆ ಸಹ ನಮ್ಮ ಕೈಗೆ ಸುಲಭವಾಗಿ ಎಟುಕಲಾರದು. ಇದಕ್ಕಾಗಿ ನಮ್ಮ ಶ್ರಮ ನಿತ್ಯ ನಿರಂತರವಾಗಿರಬೇಕು. ಇಂತಹ ಜೀವನವೆಂಬ ನಾಟಕ ಹೇಗಿದೆ- ? ಎಲ್ಲಿ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ಮಾನ್ಯ ಡಿ.ವಿ.ಜಿ.ಯವರು ಹೀಗೆನ್ನುತ್ತಾರೆ.
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ |
ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ ||
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |
ನೋಟಕರು ಮಾಟಕರೆ – ಮಂಕುತಿಮ್ಮ ||
ಬ್ರಹ್ಮಾಂಡವೆಂಬ ರಂಗಸ್ಧಲದ ನಾಟಕದಲ್ಲಿ ಕೋಟಿ ಕೋಟಿ ನಟರು ಚಿತ್ರವಿಚಿತ್ರ ಪಾತ್ರಗಳ್ನನು ಧರಿಸಿ ಆಡುತ್ತಿದ್ದಾರೆ, ಈ ಆಟಕ್ಕಾದರೋ ಕಡೆಯಂತೂ ಇಲ್ಲ ಅಲ್ಲದೇ ಈ ಆಟದ ಪ್ರಾರಂಭ ಯಾವುದೋ, ಅಂತ್ಯಯಾವುದೋ ಒಂದೂ ತಿಳಿಯದೆ ಪಾತ್ರಧಾರಿಗಳು ನಾವೇ ಪ್ರೇಕ್ಷಕರೂ ನಾವೇ ಆಗಿದ್ದೇವೆ.
ಕೊನೆ ಮೊದಲಿಲ್ಲದ ನಾಟಕದಲ್ಲಿ ಆಡಿಸುವಾತನ ಕೈಚಳಕಕ್ಕನುಗುಣವಾಗಿ, ಮಾಡುವ ಪಾತ್ರದ ಅರಿವು ಸಹ ಇಲ್ಲದೆ ಆಡುವ ಪಾತ್ರಧಾರಿಗಳೂ ನಾವಾಗಿದ್ದೇವೆ, ಇಡೀ ಬ್ರಹ್ಮಾಂಡ ಭೂಮಂಡಲವೇ ನಮ್ಮ ರಂಗಸ್ಥಲ, ಇಲ್ಲಿ ನಟನೆ ಮಾಡುವವರು ನುರಿತ ರಂಗ ಕರ್ಮಿಗಳೇ ಆಗಿರಬೇಕೆಂದೇನು ಇಲ್ಲ, ಎಲ್ಲರೂ ಸಹ ಅವರವರ ಪಾತ್ರ ನಿರ್ವಹಿಸುವ ಶಕ್ತಿ ಸಾಮಥ್ರ್ಯವುಳ್ಳ ಕುಶಲಿಗರೇ ಆಗಿದ್ದಾರೆ ಎಂಬುದಂತೂ ಸತ್ಯ ಏಕೆಂದರೆ ಇಲ್ಲಿನ ಪಾತ್ರಧಾರಿಗಳಿಗೆ ನಾಟಕದ ತರಭೇತಿಯೇ ಬೇಕಿಲ್ಲ, ಯಾವುದೇ ಪೂರ್ವ ತಯಾರಿಯೂ ಸಹ ಇಲ್ಲದೆ ಸಮರ್ಥವಾಗಿ ನಿಭಾಯಿಸಬಲ್ಲ ಜಾಣ್ಮೆಯುಳ್ಳವರು, ಇಂತಹ ನಾಟಕದಲ್ಲಿ ಪಾತ್ರಧಾರಿ ಪ್ರೇಕ್ಷಕ ಎಲ್ಲವೂ ನಾವೇ ಆಗಿದ್ದೇವೆ ಹಾಗಂತ ಈ ನಾಟಕಕ್ಕೆ ಕಥೆ ಬರೆಯುವ ಹೊಣೆಗಾರಿಕೆ ಮನುಜನದಲ್ಲ, ಇದರ ಕಥೆಗಾರ, ಸೂತ್ರಧಾರ ಬೇರೊಬ್ಬ. ಅವನೋ ಅಜ್ಞಾತವಾಸಿ ! ಇದರಲ್ಲಿ ನಾವು ಯಾವುದು ಮೊದಲು, ಯಾವುದು ಕೊನೆ ಅಂತೇನು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಏಕೆಂದರೆ ಇದರ ಅಂತ್ಯ- ಆದಿ ಎಲ್ಲವನ್ನು ಈ ಅಜ್ಞಾತವಾಸಿಯೇ ನಿಭಾಯಿಸಬಲ್ಲ ಹಾಗಾಗಿ ಬರೀ ನಾಟಕದ ಅಭಿನಯ ಮಾತ್ರ ನಮ್ಮ ನಿಮ್ಮದು. ಇಲ್ಲಿ ನಮ್ಮ- ನಮ್ಮ ಪಾತ್ರ ಮುಗಿದ ಕೂಡಲೆ ಹೊರಡುತ್ತಿರುವುದೊಂದೇ ಕೆಲಸ ನಮ್ಮದು.
ಈ ನಾಟಕದ ಅಭಿನಯದಲ್ಲಿ ಮೆಚ್ಚುಗೆ ಗಳಿಸಬೇಕೆಂಬ ಗುರಿಯಿಂದ ಮುನ್ನುಗ್ಗಿ ಗೆಲುವು ಸಾಧಿಸುವವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ, ಎಲ್ಲರೂ ಅವರವರ ಪಾತ್ರವನ್ನು ಮಾಡುವ ಕಲೆಯನ್ನು ಕೊಟ್ಟಿರುವ ಸೃಷ್ಟಿಕರ್ತ ಗೆಲುವು ಸಾಧಿಸಲು ಮಾತ್ರ ತನ್ನದೇ ಆದ ಹತ್ತು ಹಲವು ನಿಬಂಧನೆಗಳನ್ನು ಇಟ್ಟಿದ್ದಾನೆ, ಇದನ್ನರಿತು ಮುನ್ನುಗ್ಗುವವರು ಮಹಾನ್ ಸಾಧಕರು ಮಾತ್ರ.
ನಾಟಕದೊಳನುವಿಂದ ಬೆರೆತದನು ಮೆಚ್ಚಡನಿಸಿ !
ನೋಟಕನು ಮಾಗಿ ತಾಂ ನಲಿದು ನಲಿಯಿಸುವಾ !!
ಪಾಠವನು ಕಲಿತವನೆ ಬಾಳನಾಳುವ ಯೋಗಿ !
ಆಟಕಂ ನಯವುಂಟು – ಮಂಕುತಿಮ್ಮ !!
ಈ ಜಗತ್ತಿನ ನಾಟಕದಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರೀತಿಯಿಂದ ಇದರಲ್ಲಿ ಬೆರೆತು ತಾನೂ ಸಂತೊಷವಾಗಿದ್ದುಕೊಂಡು ಇತರರನ್ನೂ ಸಂತೋಷವಗಿಡುವ ಕಲೆಯನ್ನು ಅರಿತವನು ಈ ಬಾಳನ್ನು ಸಮನಾಗಿ ಸ್ವೀಕರಿಸಿಕೊಂಡು ಹೋಗಲು ಯೋಗ್ಯತೆಯುಳ್ಳ ವನಾಗುತ್ತಾನೆ, ಅಲ್ಲದೆ ಬದುಕಿನ ಸತ್ಯಾಸತ್ಯತೆಯನ್ನು ಅರಿಯಬಲ್ಲ ಯೋಗಿಯಾಗಿ, ಇಹಪರ ಲೋಕದ ಜ್ಞಾನವನ್ನು ಹಾಗೂ ಈ ಜೀವನದ ಚದುರಂಗದಾಟದ ಮರ್ವವನ್ನು ಅರಿತು ಸಕಲವನ್ನು ಈಶ್ವರನ ಪಾದಗಳಲ್ಲಿರಿಸಿ ತಾನು ಈ ಲೋಕ ವ್ಯವಹಾರಕ್ಕೆ ಅಂಟಿಕೊಳ್ಳದೆ ಬದುಕು ಸಾಗಿಸುವ ಪಾರಮಾರ್ಥಿಕ ಸತ್ಯವನ್ನು ಅರಿತವನಾಗುವುದರ ಜೊತೆಗೆ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಜೀವನ ವನ್ನು ಸಾಗಿಸುತ್ತಾ ಲೋಕದ ವ್ಯಾಪಾರವನ್ನು ಮುಗಿಸಬಲ್ಲವನಾಗುತ್ತಾನೆ.
ಈ ಜಗತ್ತಿನ ನಾಟಕವನ್ನು ಆಡಿಸುವ ಆ ಕಾಣದ ಕೈಯಲ್ಲಿ ಸೂತ್ರವನ್ನು ಹಿಡಿದಿರುವ ಅತೀತವಾದ ಶಕ್ತಿಯನ್ನು ಅರಿತುಕೊಂಡು ಬಾಳುವವನಿಗೆ ಮಾತ್ರವೇ ಈ ಜಗತ್ತು ನನ್ನದಲ್ಲ ನನ್ನಿಂದ ಏನೂ ನಡೆಯಲಾರದು ಎಂಬ ಜ್ಞಾನದ ಅರಿವಾಗುವುದು. ಯಾರು ಈ ಜಗದ ವ್ಯವಹಾರಕ್ಕೆ ಅಂಟಿಕೊಂಡು ಇರುತ್ತಾರೆಯೋ ಅವರು ಸದಾಕಾಲವೂ ಸಹ ಬೇರೆಯದೆ ಆದ ಚಿಂತೆ ಅದು ಸಹ ಬಾಳನ್ನು ವ್ಯರ್ಥವಾಗಿಸುತ್ತದೆ. ಆದ್ದರಿಂದ ಭಗವಂತನಿಂದ ಕೊಡಲ್ಪಟ್ಟಿರುವ ಬದುಕನ್ನು ನಾವು ಬದುಕಿಯೇ ತೀರಬೇಕು ಆದ್ದರಿಂದ ಇರುವುದರಲ್ಲಿ ತೃಪ್ತಿ ಕಾಣುತ್ತಾ ಪರರ ಸ್ವತ್ತಿಗಾಗಲಿ, ಸಂಪತ್ತಿಗಾಗಲಿ ಆಸೆಪಡದೆ ನನ್ನೆದುರು ಇರುವ ಸುಖ ಇಂದು ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂಬುದು ಈ ಲೋಕ ವ್ಯವಹಾರದ ಸತ್ಯವಾದ ವಿಚಾರವಾಗಿದೆ.
ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |
ತೊರೆದಾಯಸಂಗೊಳ್ಳೆ ದೊರೆವ ಫಲವೇನು ? ||
ಸುರಧನುವಿಗೇಣಿಯಿಡ ಹೊರಟುನಿನ್ನಂಗಳದ |
ಕಿರಿಪೂವ ಮರೆಯುವೆಯ – ಮಂಕುತಿಮ್ಮ ||
ಸದಾಕಾಲ ಪರಲೋಕದ ಬಗ್ಗೆ ಚಿಂತಿಸುತ್ತಾ ಭೂಮಿಯ ಮೇಲೆ ನಮ್ಮ ಬದುಕು ವ್ಯರ್ಥವನ್ನುತ್ತಾ ಬದುಕನ್ನು ಹೊರೆ ಎಂಬಂತೆ ಈ ಜಗತ್ತಿನ ನಂಟೇ ಬೇಡ ಎಂದರೆ ದೊರೆಯುವ ಫಲವಾದರೂ ಏನು ? ಆಕಾಶದಲ್ಲಿ ಕಾಣುವ ಕಾಮನಬಿಲ್ಲನ್ನು ಹಿಡಿಯುವ ಭರದಲ್ಲಿ ಮನೆಯಂಗಳದಲ್ಲಿ ಅರಳಿದ ಪುಟಾಣಿ ಹೂವನ್ನು ಮರೆಯಬೇಡ.
ಈ ಜಗತ್ತಿನಲ್ಲಿ ಇರುವುದನ್ನು ನೋಡಿ ಸಂತೋಷದಿಂದ ತೃಪ್ತಿ ಹೊಂದಿ ಬದುಕನ್ನು ಸಾಗಿಸುವುದನ್ನು ಬಿಟ್ಟು ಕೈಗೆ ಎಟುಕದಿರುವುದಕ್ಕೆ ಕೈ ಹಾಕಿ ನಿರಾಶರಾಗುವುದು ಅದರಿಂದ ಹತಾಶರಾಗಿ ಈ ಭುಮಿಯ ಮೇಲೆ ನಮ್ಮ ಜನ್ಮವೇ ವ್ಯರ್ಥ ಎಂಬ ತೀರ್ಮಾನಕ್ಕೆ ಬರುವುದು ಖಂಡಿತವಾಗಿಯೂ ಸಲ್ಲದು. ದೂರದಾಗಸದಲ್ಲಿ ಕಾಣುವ ಕಾಮನಬಿಲ್ಲನ್ನು ನೋಡಿ ಮನವನ್ನು ಮುದಗೊಳಿಸಿಕೊಳ್ಳಬೇಕೇ ಹೊರತು ಅದನ್ನು ಹಿಡಿಯುವ ಹುಚ್ಚು ಸಾಹಸಕ್ಕೆ ಹೋಗಬಾರದು. ಮನೆಯ ಅಂಗಳದ ಮೂಲೆಯಲ್ಲಿ ಅರಳಿದ ಪುಟ್ಟ ಹೂವಿನ ಸೊಬಗನ್ನು ಸಹ ದೊಡ್ಡದೆಂಬಂತೆ ಕಾಣುವ ವಿಶಾಲವಾದ ಮನೋಭಾವ ಹೊಂದಬೇಕು. ಆಗ ಜೀವನದ ಏರು ಪೇರುಗಳನ್ನು ಸಮನಾಗಿ ಸ್ವೀಕರಿಸುವ ಮನೋಬಲ ತಾನಾಗಿಯೇ ಬರುತ್ತದೆ.
ನಿಲುಕದ ನಕ್ಷತ್ರಕ್ಕೆ ಕೈ ಹಾಕಿ ತೆಗೆದುಕೊಳ್ಳುವ ವ್ಯರ್ಥ ಪ್ರಯತ್ನವು ನಮ್ಮ ದುರಾಸೆಯನ್ನೇ ತೊರಿಸುತ್ತದೆ ಆದರೆ ಅದೇ ನಮ್ಮ ಸುತ್ತ ಮುತ್ತಲಿರುವ ಸಣ್ಣಪುಟ್ಟ ವಸ್ತುಗಳಲ್ಲಿ ಸಂತೋಷಗೊಳ್ಳುವ ಮನಸ್ಥಿತಿ ನಮ್ಮ ಮನಸ್ಸನ್ನೇ ಉಲ್ಲಾಸಗೊಳಿಸಿ ಇದ್ದದ್ದರಲ್ಲಿ ತೃಪ್ತರಾಗುವ ಮನೋಭಾವವನ್ನು ಬೆಳೆಸುತ್ತದೆ. ಆದ್ದರಿಂದ ನಮ್ಮ ಕಣ್ಣಿಗೆ ಕಾಣುವ ಹಾಗೂ ಕೈಗೆ ಏಟುಕುವ ವಸ್ತುಗಳಲ್ಲಿ ತೃಪ್ತರಾಗಿ ಜೀವನ ನಡೆಸುವುದು ಸಹ ಒಂದು ಕಲೆ. ಈ ಕಲೆಯನ್ನು ಕಲಿತವನು ಬಾಳಿನ ನಾಟಕದಲ್ಲಿ ಪಕ್ವವಾಗಿ ಅಭಿನಯವನ್ನು ಮಾಡಿ ಪಾತ್ರಧಾರಿಯಾಗಿಯೂ ಅಂತೆಯೇ ಪ್ರೇಕ್ಷಕನಾಗಿಯೂ ಗೆಲ್ಲಬಲ್ಲವನಾಗುತ್ತಾನೆ.
ಆದ್ದರಿಂದ ಬ್ರಹ್ಮ ರಚಿಸಿರುವ ರಂಗಭೂಮಿಯಲ್ಲಿ ನಾಟಕವನ್ನು ಆಡಬೇಕಾದ ಅನಿವಾರ್ಯತೆ ಹುಟ್ಟಿದ ಎಲ್ಲ ಜೀವಿಗಳಿಗೂ ಇದ್ದೇ ಇದೆ. ಇರುವ ವಿಷಯಗಳಲ್ಲಿ, ಕಾಣುವ ವಸ್ತು ಗಳಲ್ಲಿ ಸಿಗಬಹುದಾದ ಸಂತೋಷವನ್ನು ಹುಡುಕಿಕೊಳ್ಳುವವನೇ ಜಗದ ಗುಟ್ಟನ್ನು ಬಲ್ಲವನಾಗಿ ಸಾರ್ಥಕವಾದ ಬದುಕನ್ನು ಸಾಗಿಸಿ ಈ ಲೋಕ ವ್ಯಾಪಾರವನ್ನು ಯಾವೊಂದು ಜಂಜಾಟಕ್ಕೆ ಅಂಟಿಕೊಳ್ಳದೇ ನಿಶ್ಚಿಂತೆಯಿಂದ ನಿರಾತಂಕವಾಗಿ ಮುಗಿಸಬಲ್ಲ ಜಾಣನಾಗುತ್ತಾನೆ. ಜಗದ ನಾಟಕದ ಚತುರ ಕಲಾಕಾರನಾಗಿ ಉಸಿರಿರುವರೆಗೂ ತನ್ನ ಪಾತ್ರದ ಆಳಅಗಲವನ್ನು, ಅದರ ಮಿತಿಯನ್ನೂ ಸಹ ಅರಿತು ಸಾರ್ಥಕ ಬದುಕನ್ನು ಸಾಗಿಸುತ್ತಾ ಪರಮ ಸಾತ್ವಿಕನೆನಿಸಿಕೊಳ್ಳುತ್ತಾನೆ.



