ಲೇಖನ : ನಂದೀಶ್ ಗಣಾಚಾರಿ

ನಾನು ಮಾರ್ಜಾಲ, ಆಡು ಭಾಷೆಯಲ್ಲಿ ಬೆಕ್ಕು ಅಂತಾರೆ… ಇನ್ನೂ ಕೆಲವರು ಕಳ್ಳಬೆಕ್ಕು ಅಂತಾರೆ.. ಹೌದು ನಾನು ನನ್ನ ಹೊಟ್ಟೆಪಾಡಿಗಾಗಿ ಅವರಿವರ ಮನೆಯ ಅಡುಗೆ ಮನೆಗೆ ಇಣುಕಿ ನನಗೆ ಇಷ್ಟವಾದ ಹಾಲಿಗೆ ಹುಡುಕಾಡಿ ತಡಕಾಡಿ ಕಡೆಗೆ ಎಲ್ಲೋ ಒಂದು ಕಡೆ ಅದು ಕುಡಿಯುವ ಅವಕಾಶ ಸಿಕ್ಕರೆ ತಪ್ಪದೇ ಕುಡಿದೆ ಬರುವೆ… ಅದು ನನ್ನ ಸಾಕಿ ಸಲುಹಿದ ಯಜಮಾನನ ಮನೆಯಾದರೂ ಸರಿಯೇ ಹಾಲು ಕಂಡರೆ ನಾನು ಬಿಡುವುದೇ ಇಲ್ಲ. ಕೃಷ್ಣ ಹೇಗೆ ಬೆಣ್ಣೆ ಕಂಡಾಗ ಕದ್ದು ಮುಚ್ಚಿ ತಿಂದು ತೇಗುತ್ತಿದ್ದನೋ ಹಾಗೆಯೇ ನಾನು ಸಹ…ಅದಕ್ಕೆ ಇರಬೇಕು ನನಗೂ ಕಳ್ಳಬೆಕ್ಕು ಅಂತ ನಾಮಕರಣ ಮಾಡಿದ್ದು. ಹಾಗೆ ಕರೆಯುವುದರಿಂದ ನನಗೇನು ಬೇಜಾರಿಲ್ಲ. ಯಾಕೆಂದರೆ ನಾನು ಸ್ವಲ್ಪ ತುಂಟನೆ. ಆದರೆ ಕುಡಿದ ಹಾಲಿಗೆ ನಿಯತ್ತಾಗಿ ಅವರ ಮನೆಗೆ ಒಂದೇ ಒಂದು ಇಲಿಯಾಗಲೀ ಇತರ ಸಣ್ಣ ಪುಟ್ಟ ಕ್ರಿಮಿ ಕೀಟಗಳಾಗಲಿ ಬರದಂತೆ ನೋಡಿಕೊಳ್ಳುತ್ತೇನೆ.
ಆದರೆ ನನಗೆ ತೀರಾ ಬೇಸರವೇನಿಸುವ ಸಂಗತಿ ಎಂದರೆ ನನ್ನನ್ನ ಈ ಮನುಷ್ಯ ಅಪಶಕುನವಾಗಿ ನೋಡುವುದು. ನನಗೆ ಯಾಕೆ ಈ ಹಣೆಪಟ್ಟಿ? ಅಂತಹ ತಪ್ಪು ನಾನೇನು ಮಾಡಿದ್ದೇನೆ? ಈ ಮನುಷ್ಯ ಕೆಲವೊಮ್ಮೆ ತಾನು ಅಂದುಕೊಂಡದ್ದು ನೆರವೇರಲಿಲ್ಲ ಅಂದರೆ ಆ ಸೋಲಿನ ಹೊಣೆಯನ್ನು, ಹತಾಶೆಯನ್ನು, ಅವನ ವೈಫಲ್ಯವನ್ನು ಸಾರಾಸಗಟಾಗಿ ನನ್ನಂತಹ ಮೂಕ ಪ್ರಾಣಿಗಳ ಮೇಲೆ ಹೊರೆಸಿಬಿಡುತ್ತಾನಲ್ಲವೇ? ನಾನು ಅಪಶಕುನವೇ ಆಗಿದ್ದರೆ ನನ್ನ ಯಾಕೆ ಎಲ್ಲರೂ ಮನೆಯಲ್ಲಿ ಸಾಕಿಕೊಂಡು ಸಲಹುವರು? ಅದೃಷ್ಟದ ಸಂಕೇತವಾಗಿರುವ ನರಿಯನ್ನೇ ತಂದು ಮನೆಯಲ್ಲಿ ಇಟ್ಟುಕೊಳ್ಳಬಹುದಲ್ಲವೇ? ಇಂತಹದ್ದನ್ನು ನೆನಸಿಕೊಂಡಾಗೆಲ್ಲ ಸಣ್ಣ ನಗುವೊಂದು ಮೂಡಿ ಮರೆಯಾಗುತ್ತೆ.
ಬೆಂಗಳೂರಲ್ಲಿ ಒಬ್ಬರು ತಮ್ಮ ಮನೆಯಲ್ಲಿ 40ಕ್ಕೂ ಅಧಿಕ ಬೆಕ್ಕುಗಳನ್ನ ಅಂದರೆ ನನ್ನ ಸಹೋದರ ಸಂಬಂಧಿಗಳನ್ನ ಸಾಕುತ್ತಿದ್ದಾರೆ. ಬರುವ ಸಂಬಳದಲ್ಲಿ ಮನೆಯನ್ನೂ ನಿಭಾಯಿಸಿ ಅವುಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ದಿನಬೆಳಗಾದರೆ ಅವರಿಗೆ ನಮ್ಮಗಳ ಮುಖ ದರ್ಶನವೇ. ಹಾಲ್, ಕಿಚನ್, ಬೆಡ್ರೂಮ್, ಸಿಟ್‍ಔಟ್ ಅಂತ ಹೀಗೆ ಎಲ್ಲ ಕಡೆ ನಾವೇ ಇರ್ತೇವೆ. ಅವರ ಪ್ರತಿ ಹೆಜ್ಜೆಗೂ ಅಡ್ಡಲಾಗಿ ಓಡಾಡುತ್ತಾ ಇರುತ್ತೇವೆ. ಅಂದ ಹಾಗೆ ಅವರಿಗೆ ಪ್ರತಿ ದಿವಸವೂ ಕೆಟ್ಟದ್ದೇ ಆಗಬೇಕಲ್ಲ ? ಅಪಶಕುನಿಗಳು ಎಂಬ ಕಳಂಕ ಹೊತ್ತುಕೊಂಡಿರುವ ನಮ್ಮನ್ನ ಅವರು ಅಷ್ಟು ಪ್ರೀತಿ ವಿಶ್ವಾಸ ತೋರಿಸುವಾಗ ನಾವು ಅವರಿಗೆ ಕೆಡುಕನ್ನ ಬಯಸುತ್ತೇವೆಯಾ? ಇಲ್ಲ ಅದಕ್ಕೆ ಪ್ರತ್ಯುತ್ತರವೆಂಬಂತೆ ಅವರ ಮಕ್ಕಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ. ನಾವುಗಳು ನಿಜವಾಗ್ಲೂ ಅಪಶಕುನವೇ ಆಗಿದ್ದರೆ ಅವರಿಗೆ ಉನ್ನತಿಯೇ ಆಗಬಾರದಲ್ಲವೇ?
ಹಾಗೆಯೇ ಇನ್ನೊಂದು ವಿಷಯ ಹೇಳಬೇಕು. ಹೀಗೆಯೇ ನಾನು ಒಂದು ದಿನ ನನ್ನ ಹೊಟ್ಟೆಪಾಡಿಗಾಗಿ ನನ್ನ ಊಟವನ್ನು ಹುಡುಕುತ್ತಾ ರಸ್ತೆಯಲ್ಲಿ ಅಲೆಯುತ್ತಿರಬೇಕಾದರೆ ಈ ಕಡೆಯಿಂದ ಆ ಕಡೆಗೆ ರಸ್ತೆದಾಟಬೇಕಾಗಿತ್ತು ಹಾಗಾಗಿ ನಾನು ನನ್ನ ಪಾಡಿಗೆ ರಸ್ತೆ ದಾಟುತ್ತಿದ್ದಾಗ ಅಲ್ಲೊಬ್ಬ ಗಾಡಿಯಲ್ಲಿ ಬರುತ್ತಿದ್ದ. ನಾನು ರಸ್ತೆ ದಾಟುವುದನ್ನು ಗಮನಿಸಿದ ಆತ ನಾನು ದಾಟಿದ ರಸ್ತೆಯ ಮೇಲೆ ಅವನು ಹೋದರೆ ಅವನಿಗೇನೋ ಕೆಡಕಾಗುತ್ತೆ ಅನ್ನೋ ಮೂಢನಂಬಿಕೆಯಿಂದ ಜೋರಾಗಿ ಬರುತ್ತಿದ್ದ ಆತ ಒಮ್ಮೆಲೇ ಗಾಡಿಗೆ ಬ್ರೇಕ್ ಹಾಕಿ ಬಂದ ದಾರಿಯ ಕಡೆಗೆ ಗಾಡಿಯನ್ನು ತಿರುಗಿಸಲು ಹೋದ ಆದರೆ ಅವನ ಹಿಂದೆಯೇ ಬರುತ್ತಿದ್ದ ಇನ್ನೊಂದು ಗಾಡಿ ಈತ ಒಮ್ಮೆಲೇ ಗಾಡಿ ನಿಲ್ಲಿಸಿದ್ದಕ್ಕೆ ಅವನ ಹಿಡಿತಕ್ಕೆ ಸಿಗದೇ ಢಬಾರನೆ ಅಂತ ಬಂದು ಗುದ್ದೆ ಬಿಟ್ಟ. ಆಗ ನನಗೆ ಅನಿಸಿದ್ದು ಸುಮ್ಮನೇ ನಾನು ದಾಟಿ ಹೋಗಿದ್ದ ರಸ್ತೆಯನ್ನು ಆತನು ದಾಟಿ ಹೋಗಿದಿದ್ದರೆ ಇದೆಲ್ಲಾ ಆಗ್ತಾ ಇರ್ತಿಲಿಲ್ಲ ಅಲ್ವಾ? ದಾಟಬಾರದೆಂಬ ಅವನ ಆ ನಂಬಿಕೆಯೇ ಅವನನ್ನ ಅಪಘಾತಕ್ಕೀಡು ಮಾಡಿಕೊಟ್ಟಿತು.
ಆದರೆ ನಮ್ಮನ್ನ ರಸ್ತೆಯಲ್ಲಿ ನೋಡಿದಾಗ ಸ್ವಲ್ಪ ಹೊತ್ತು ನಿಂತು ಆಮೇಲೆ ಮುಂದಕ್ಕೆ ಹೋಗಬೇಕು ಅನ್ನೋ ಮಾತಿದೆ. ಅದಕ್ಕೆ ಕಾರಣವಿಷ್ಟೇ, ಹಿಂದೆಯೆಲ್ಲ ಈಗಿನಂತೆ ಕಾರ್, ಬಸ್, ಗಾಡಿ ಸಾರಿಗೆಯ ವ್ಯವಸ್ಥೆ ಇರಲಿಲ್ಲ. ಯಾವುದೇ ಬೆಳಕಿನ ವ್ಯವಸ್ಥೆಯು ಇರಲಿಲ್ಲ, ಹಾಗಾಗಿ ಕತ್ತಲೆಯಲ್ಲಿ ಜಟಾಕ ಬಂಡಿಯೋ, ಎತ್ತಿನ ಬಂಡಿಯಲ್ಲೋ ಹೋಗುವಾಗ ಹುಲಿ ಚಿರತೆಗಳು ಅಡ್ಡ ಬಂದರೆ ಅವುಗಳ ಕಣ್ಣುಗಳು ಕತ್ತಲೆಯಲ್ಲಿ ಮಿಂಚಿನಂತೆ ಹೊಳೆಯುತ್ತಿದ್ದವು ಹಾಗಾಗಿ ಸ್ವಲ್ಪೊತ್ತು ನಿಂತು ಅವುಗಳು ಹೋದಮೇಲೆ ಹೋಗುತ್ತಿದ್ದರು. ನಾನು ಸಹ ಅವರ ಕುಟುಂಬಕ್ಕೆ ಸೇರಿದವನು ಆದರೆ ಅವರಷ್ಟು ಕ್ರೂರಿ ಅಲ್ಲ. ನಮ್ಮ ಕಣ್ಣುಗಳು ಅವರ ಹಾಗೆಯೇ ಕತ್ತಲೆಯಲ್ಲಿ ಮಿಂಚುತ್ತವೆ ಹಾಗಾಗಿ ಒಮ್ಮೊಮ್ಮೆ ಕತ್ತಲೆಯಲ್ಲಿ ನಾವು ಬಂದರು ಅದು ಅವರಿಗೆ ಹುಲಿ ಚಿರತೆಗಳಂತೆ ಭಾಸವಾಗುತ್ತಿತ್ತು ಹಾಗಾಗಿ ಅವರೆಲ್ಲ ನಮ್ಮನ್ನ ನೋಡಿದ ತಕ್ಷಣ ಸ್ವಲ್ಪೊತ್ತು ನಿಂತು ಆಮೇಲೆ ಹೊರಡುತ್ತಿದ್ದರು. ಅದುಬಿಟ್ಟರೆ ಬೇರೆ ಯಾವ ಶಕುನವು ಇಲ್ಲ.
ಮನುಷ್ಯ ಎಲ್ಲವನ್ನೂ ಇನ್ನೊಬ್ಬರ ತಲೆಗೆ ಅದೆಷ್ಟು ಸುಲಭವಾಗಿ ಕಟ್ಟಿಬಿಡುತ್ತಾನಲ್ಲ? ನಮಗೆ ಮಾತು ಬರುವುದಿಲ್ಲ ಎಂಬ ಮಾತ್ರಕ್ಕೆ ನಮ್ಮ ಮೇಲೆ ಏನ್ ಆಪಾದನೆ ಹೊರಿಸಿದರು ನಡೆಯುತ್ತೆ ಅನ್ನೋದು ಬುದ್ಧಿವಂತ ಮನುಜನ ಲೆಕ್ಕಾಚಾರ. ಈಗಲಾದರೂ ನಮ್ಮನ್ನ ಅಪಶಕುನದಂತೆ ನೋಡುವುದನ್ನ ಬಿಟ್ಟು ನಿಮ್ಮಲ್ಲಿ ಒಬ್ಬರಾಗಿ ನೋಡಿ ಅಷ್ಟೇ ನಾವು ಕೇಳಿಕೊಳ್ಳೋದು. ನಮ್ಮ ಗೆಳೆಯರಾದ ನಾಯಿಗಳಷ್ಟೇ ಪ್ರೀತಿಗೆ ಮಮತೆಗೆ ಅರ್ಹರು ನಾವು


