ಬಸವತತ್ವದ ಬಗ್ಗೆ ಮಾತನಾಡುತ್ತೇವೆ. ಬಸವಣ್ಣನವರನ್ನು ಕೊಂಡಾಡುತ್ತೇವೆ. ಆದರೆ ನಮ್ಮ ನುಡಿ-ನಡೆ ಆ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂದು ಚಿಂತನೆ ಮಾಡಬೇಕಿದೆ. ವೀರಶೈವ ಲಿಂಗಾಯತ ಸಮಾಜ ಎಂದರೆ ಆಲದ ಮರದಂತೆ. ಎಲ್ಲ ಸಮಾಜಗಳಿಗೂ ನಮ್ಮ ಸಮಾಜ ನೆರಳಿದ್ದಂತೆ. ಸಮಾಜವನ್ನು ಒಡೆದಾಳುವ ನೀತಿಯನ್ನು ಇಂದಿನ ಕಾಲಘಟ್ಟದಲ್ಲಿ ಕಾಣುತ್ತಿದ್ದೇವೆ. ಸಮಾಜ ಸಮಾಜಗಳ ಮಧ್ಯೆ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುವವರ ಬಗ್ಗೆ ಜಾಗೃತರಾಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಚಿಕ್ಕಮಗಳೂರು ನಗರದ ಹೊರವಲಯದ ದೊಡ್ಡಕುರುಬರಹಳ್ಳಿಯ ಶ್ರೀಬಸವತತ್ವ ಪೀಠದಿಂದ ಶುಕ್ರವಾರ ಆಯೋಜಿಸಲಾಗಿದ್ದ ಬಸವತತ್ವ ಸಮಾವೇಶದಲ್ಲಿ ದಾಕ್ಷಾಯಣಿ ಜಯದೇವಪ್ಪ ಅವರ ದಾಕ್ಷಾಯಣಿ ವಚನಗಳು ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಸವಣ್ಣ ಅವರನ್ನು ವಿಶ್ವಗುರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅವರು ಸಾಮಾಜಿಕ ಕ್ರಾಂತಿಯ ಸಂದೇಶ ನೀಡಿದ್ದಾರೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅತ್ಯಂತ ಸರಳವಾಗಿ ಜನಸಾಮಾನ್ಯರ ಮಸಸ್ಸಿಗೆ, ಹೃದಯಕ್ಕೆ ತಟ್ಟುವ ರೀತಿಯಲ್ಲಿ ಮಾನವ ಧರ್ಮದ ಶ್ರೇಷ್ಟತೆ ಬಗ್ಗೆ ತಿಳಿಸಿಕೊಟ್ಟಿರುವವರು ಬಸವಣ್ಣನವರು. ಮನುಷ್ಯ ಕುಲವೆಲ್ಲಾ ಒಂದೇ ಕುಟುಂಬ ಎಂದು ತಿಳಿಸಿಕೊಟ್ಟು ಹೋದ ಮಹಾತ್ಮರು ಎಂದು ಬಣ್ಣಿಸಿದರು.
ಅನೇಕ ಹರಗುರು ಚರಮೂರ್ತಿಗಳು ಕನ್ನಡ ನಾಡಿನಲ್ಲಿ ಏನೇ ಸಮಸ್ಯೆ ಬಂದಾಗಲೂ, ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆದಾಗಲೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದನ್ನು ನಾವು ಜೀವನದಲ್ಲಿ ಎಂದಿಗೂ ಮರೆಯಬಾರದು. ನಾಡಿನ ಕೋಟ್ಯಂತರ ಮಕ್ಕಳಿಗೆ ಶಿಕ್ಷಣ ಅನ್ನ ನೀಡಿ ಪಾಲಿಸಿದವರು ಮಠಮಂದಿರಗಳು ಹಾಗೂ ಸ್ವಾಮೀಜಿಗಳು. ಸಮಾಜ ಕಟ್ಟುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತಿರುವವರೂ ಸ್ವಾಮೀಜಿಗಳು. ಜಗತ್ತಿನಲ್ಲಿ ಅನೇಕ ದಾರ್ಶನಿಕರು ಬಂದುಹೋಗಿದ್ದಾರೆ. ಆದರೆ ಬಸವತತ್ವಕ್ಕೆ ಸರಿದೂಗುವ ಗ್ರಂಥಗಳು ಜಗತ್ತಿನಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ್ದ ರಾಷ್ಟ್ರವನ್ನಾಗಿ ಮಾಡಲು ಸಂಕಲ್ಪ ಮಾಡಿ ತಪ್ಪಸ್ಸಿನಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರೇರಣೆಯಾಗಿರುವುದು ಬಸವತತ್ವ ಎಂಬುದು ವಿಶೇಷವಾಗಿದೆ. ರಾಜ್ಯದಲ್ಲಿ ಅನೇಕ ರಾಜಕಾರಣಿ, ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಆದರೆ ಬಸವತತ್ವಗಳನ್ನು ಆಧಾರವಾಗಿಟ್ಟುಕೊಂಡು ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂಬ ನಿಟ್ಟಿನಲ್ಲಿ ನಾಡಿನ ಎಲ್ಲ ಸಮಾಜಗಳಿಗೂ ನ್ಯಾಯಕೊಟ್ಟ ಕೀರ್ತಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಲಲ್ಲುತ್ತದೆ.
ಯಡಿಯೂರಪ್ಪ ಅವರು ಕೇವಲ ವೀರಶೈವ ಮಠಗಳಿಗೆ ಮಾತ್ರ ಅನುದಾನ ನೀಡಲಿಲ್ಲ. ಬದಲಿಗೆ ಎಲ್ಲ ಮಠಗಳಿಗೂ ಅನುದಾನ ನೀಡುವ ಕೆಲಸ ಮಾಡಿದರು. ಇದಕ್ಕೆ ಪ್ರಮುಖ ಕಾರಣ ನಾಡಿನ ಶಕ್ತಿ ಮಠ ಮಾನ್ಯಗಳೇ ಎಂಬುದಾಗಿತ್ತು. ಹೀಗಾಗಿ ಮಠಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕರ್ತವ್ಯ ಎಲ್ಲ ಭಕ್ತರ ಮೇಲಿದೆ ಎಂದು ಹೇಳಿದರು.
ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿ, ಪಕ್ಷದ ರಾಜ್ಯಾಧ್ಯಕ್ಷನಾದ ನನ್ನ ಮೇಲೆ ಜನ ಯಾವ ರೀತಿಯ ಅಪೇಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಅರಿವು ನನಗೆ ಇದೆ. ತಾಯಂದಿರ ಆಶೀರ್ವಾದ ಇದ್ದರೆ ಏನೇ ಸಮಸ್ಯೆಗಳು ಬಂದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಬರುತ್ತದೆ. ಯಾವುದೇ ಕ್ಷೇತ್ರವನ್ನೂ ಸಮಸ್ಯೆ ಎಂಬುದು ಬಿಟ್ಟಿಲ್ಲ. ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಯಾವುದೇ ಕ್ಷೇತ್ರದಲ್ಲೇ ಇರಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ರಾಮನನ್ನು ರಾವಣ ಒಪ್ಪಲಿಲ್ಲ, ಕೃಷ್ಣನನ್ನು ಕಂಸ ಒಪ್ಪಲಿಲ್ಲ. ಧರ್ಮರಾಯನನ್ನು ದುರ್ಯೋದನ ಒಪ್ಪಲಿಲ್ಲ. ನಾವು ಯಾವುದೇ ಕೆಲಸ ಮಾಡುವಾಗಲೂ ನಮ್ಮನ್ನು ಕಾಲೆಳೆಯುವವರು ಇದ್ದೇ ಇರುತ್ತಾರೆ. ಇಂದು ಸ್ವಾಮೀಜಿಗಳನ್ನೂ ಜನ ಬಿಡುವುದಿಲ್ಲ. ಹೀಗಿರುವಾಗ ಆಡಿಕೊಳ್ಳುವವರು ರಾಜಕಾರಣಿಗಳನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ನದಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ ಹರಿದು ತನ್ನ ಗುರಿ ಮುಟ್ಟುತ್ತದೆ. ಹಾಗೆಯೇ ನಾವು ನಮ್ಮ ಜೀವನದಲ್ಲಿ ಏನೇ ಸವಾಲು ಮುಂದೆ ಬಂದರೂ ಅದನ್ನು ಸಹಿಸಿಕೊಂಡು ಮುನ್ನೆಡೆದು ಗುರಿ ತಲುಪಬೇಕು ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುಂದರವಾಗಿರುವ ಭವ್ಯ ಬಸವತತ್ವ ಪೀಠದ ನೂತನ ಮಠ ಶ್ವೇತ ಮಂದಿರದ ರೀತಿ ನಗರದ ಮಧ್ಯೆ ಎದ್ದು ನಿಂತಿರುವುದು ಸದ್ಭಕ್ತರ ಪ್ರೀತಿಯ ಸಂಕೇತ ಎಂದರು. ಸಮಾವೇಶದಲ್ಲಿ ಆಶೀರ್ವಚನ ನೀಡಿದ ಸಿಂಧಿಗೆರೆಯ ಶ್ರೀ ಕರಡಿಗವಿ ಮಠದ ಶ್ರೀಶಿವಶಂಕರ ಶಿವಯೋಗಿ ಸ್ವಾಮೀಜಿ, ಬಸವ ತತ್ವ ಗಳನ್ನು ಮೈಗೂಡಿಸಿಕೊಂಡು ಸುತ್ತಮುತ್ತಲಿನ ಭಕ್ತರ ಮನಸ್ಸನ್ನು ಗೆದ್ದಿದ್ದ ಲಿಂಗೈಕ್ಯ ಶ್ರೀ ಜಯಚಂದ್ರಶೇಖರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಅವರ ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದ ಡಾ. ಶ್ರೀ ಬಸವಮರಳಸಿದ್ದ ಸ್ವಾಮೀಜಿಗಳು ಬಸವತತ್ವ ಆಚರಣೆ ಹಾಗೂ ಪ್ರಸಾರದಲ್ಲಿ ಸಿದ್ಧಹಸ್ತರು. ಇವರು ಶ್ರೀ ಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದಿರುವುದೇ ಭಕ್ತರ ಸುದೈವ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಶಾಲಿನಿ ನಾಲ್ವಾಡ್, ಹಿರಿಯ ಸಂಶೋಧಕ ವೀರಣ್ಣ ರಾಜು ದಂಪತಿ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಬಸವತತ್ವ ಪೀಠದ ಡಾ.ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಯಳನಾಡು ಮರದ ಶ್ರೀ ಜ್ಞಾನ ಪ್ರಭು ಸಿದ್ದರಾಮ ಸ್ವಾಮೀಜಿ, ಶ್ರೀಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಪ್ರಮುಖರಾದ ಕೋಟೆ ರಂಗನಾಥ್, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.



