ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಕಷ್ಟಸಹಿಷ್ಣುತೆ, ಸಹೋದರತ್ವ ಭಾವನೆ, ನಾಯಕತ್ವ ಗುಣ, ಮಾನವೀಯ ಮೌಲ್ಯಗಳು ಅಧಿಕವಾಗಿರುತ್ತದೆ, ಸರ್ಕಾರಿ ಶಾಲೆಗಳು ಸರ್ವಜನಾಂಗದ ಸಮಗ್ರ ಭಾರತವನ್ನು ಪ್ರತಿನಿಧಿಸುತ್ತವೆ ಎಂದು ಮುದ್ರೆಮನೆ ಕಾಫಿ ಕ್ಯೂರರ್ಸ್ ಸಂಸ್ಥೆಯ ಮಾಲೀಕ ಬಿ.ಎಸ್. ಸಂತೋಷ್ ಹೇಳಿದರು.
ಅವರು ಶುಕ್ರವಾರ ಸಂಜೆ ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಪ್ರಾಥಮಿಕ ಶಾಲೆ ಆವರಣದಲ್ಲಿ ಮುದ್ರೆಮನೆ ಸಂಸ್ಥೆಯಿಂದ 2.18 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡ, ಪ್ರಾರ್ಥನಾ ಮಂದಿರ ಹಾಗೂ ಸರ್ಕಾರದ ವಿವೇಕ ಯೋಜನೆಯ 56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾವೆಲ್ಲಾ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿಯೇ ಓದಿರುವುದು. ನನ್ನ ಮಗನನ್ನು ಮುತ್ತಿಗೆಪುರ ಸರ್ಕಾರಿ ಶಾಲೆಗೆ ಸೇರಿಸಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆಯಿದೆ. ಇಂದು ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚುತ್ತಿರುವುದು ದುರದೃಷ್ಟಕರ. ನಮಗೆಲ್ಲಾ ಭವಿಷ್ಯ ರೂಪಿಸಿಕೊಟ್ಟಿರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು, ಸರ್ಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸುವುದು ಅತ್ಯಂತ ಅವಶ್ಯಕವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿ ಬದುಕಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮತ್ತು ತನ್ನ ಸ್ವಂತ ಶಕ್ತಿಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮಥ್ರ್ಯ ಸಹಜವಾಗಿಯೇ ರೂಪುಗೊಳ್ಳುತ್ತದೆ ಎಂದರು.

ಮುತ್ತಿಗೆಪುರ ಸರ್ಕಾರಿ ಶಾಲೆಗೆ ಸುಸಜ್ಜಿತವಾದ ಕಟ್ಟಡವನ್ನು ಕಟ್ಟುವ ಸದಾವಕಾಶ ನನಗೆ ಒದಗಿಬಂದಿದ್ದು ನನ್ನ ಸುಯೋಗ ಎಂದು ಭಾವಿಸುತ್ತೇನೆ. ಈ ಕಟ್ಟಡ ಈಗಿನ ಮತ್ತು ಮುಂದಿನ ಜನಾಂಗಕ್ಕೆ ಸದುಪಯೋಗವಾಗಬೇಕು. ಮುಂದೆಯೂ ಈ ಶಾಲೆಯ ಅಭಿವೃದ್ಧಿಯಲ್ಲಿ ಮುದ್ರೆಮನೆ ಸಂಸ್ಥೆ ಸದಾ ಜೊತೆಗಿರುತ್ತದೆ. ಈ ಕಟ್ಟಡ ನಿರ್ಮಾಣಕ್ಕೆ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಕರು, ಮುದ್ರೆಮನೆ ಸಂಸ್ಥೆಯ ಸಹೋದ್ಯೋಗಿಗಳು ಸಹಕಾರ ನೀಡಿದ್ದು, ಅವರೆಲ್ಲರಿಗೂ ಕೃತಜ್ಞನಾಗಿರುತ್ತೇನೆ ಎಂದರು.
ಮುತ್ತಿಗೆಪುರ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ಪೋಷಕರು ಅತ್ಯಂತ ಆಸಕ್ತಿ ತೋರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ನಮ್ಮ ಕನ್ನಡ ಭಾಷೆ ಸದಾ ನಳನಳಿಸುತ್ತಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಾಗಿ ಪ್ರಯತ್ನಿಸಬೇಕು ಎಂದರು.

ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಮಾತನಾಡಿ ; ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳು ಹಿಂದೆ ಬೀಳದಂತೆ ದಾನಿಗಳ ನೆರವು ಪಡೆದು ಉತ್ತಮವಾದ ಕಟ್ಟಡವನ್ನು ನಿರ್ಮಿಸಿದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳು ಕೂಡ ಉತ್ತಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯವಿದೆ. ಗುಣಮಟ್ಟದ ಶಿಕ್ಷಣ ದೊರಕಿದಾಗ ದೂರದ ಊರಿನಿಂದ ಕೂಡ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರ್ಪಡೆಗೊಂಡು ಶಾಲೆ ಮುಚ್ಚುವ ಹಂತದಿಂದ ಪಾರಾಗಬಹುದು. ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಿಕ ಸಂತೋಷ್ ಅವರು ತಮ್ಮ ದುಡಿಮೆಯ ಹಣದಲ್ಲಿ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಇದೇ ರೀತಿ ಎಲ್ಲಾ ಉದ್ಯಮಿಗಳು ಆಯಾ ವ್ಯಾಪ್ತಿಯ ಶಾಲೆ, ಕಾಲೇಜು ಕಟ್ಟಡಗಳನ್ನು ನಿರ್ಮಿಸಿ ಕೊಟ್ಟರೆ ಸರ್ಕಾರಕ್ಕೂ ಹೋರೆ ತಪ್ಪಿದಂತಾಗುತ್ತದೆ ಎಂದು ತಿಳಿಸಿದರು. ಮುತ್ತಿಗೆಪುರ ಶಾಲೆಯಲ್ಲಿ ಮುನ್ನೂರು ಅರವತ್ತು ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ ಎಂದರೆ ಅದು ವಿಶೇಷವಾದ ಬೆಳವಣಿಗೆ ಇದಕ್ಕೆ ಕಾರಣವಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಡಿಡಿಪಿಐ ಪುಟ್ಟರಾಜು ಮಾತನಾಡಿ ಮುದ್ರೆಮನೆ ಸಂಸ್ಥೆಯ ಮಹತ್ ಕಾರ್ಯವನ್ನು ಶ್ಲಾಘಿಸಿದರು.
ಶ್ರೀಮತಿ ಸ್ವರೂಪ ಸಂತೋಷ್, ಡಯಟ್ ಉಪನಿರ್ದೇಶಕಿ ಸುನಿತಾ, ಕ್ಷೇತ್ರಶಿಕ್ಷಣಾಧಿಕಾರಿ ಮೀನಾಕ್ಷಿ, ಬೀರೂರಿನ ಬಿಇಓ ರುದ್ರಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಧುಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ನವೀನ್, ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜ್, ಮುಖ್ಯ ಶಿಕ್ಷಕಿ ಎಸ್.ಭಾರತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಮುಸ್ಲೀಂ ನೌಕರರ ಸಂಘದ ಅಧ್ಯಕ್ಷ ಪೈರೋಜ್ ಅಹಮದ್, ಗ್ರಾ.ಪಂ. ಉಪಾಧ್ಯಕ್ಷ ಅಜಿತ್, ಶಾಲೆಯ ದೈಹಿಕ ಶಿಕ್ಷಕ ಸುರೇಶ್, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸಭಾ ಕಾರ್ಯಕ್ರಮದ ನಂತರ ಆಗಮಿಸಿ ಸರ್ಕಾರಿ ಶಾಲೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಬಿ.ಎಸ್. ಸಂತೋಷ್ ಅವರ ಕಾರ್ಯದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.





