ಹಲವು ದಿನಗಳಿಂದ ತಮ್ಮ ಗ್ರಾಮಕ್ಕೆ ಬಸ್ ವ್ಯವಸ್ಥೆ ಬೇಕೆಂದು ಬೇಡಿಕೆ ಇಟ್ಟಿದ್ದ ಮೂಡಿಗೆರೆ ತಾಲ್ಲೂಕಿನ ತಮಟೇಬೈಲ್ ಗ್ರಾಮಸ್ಥರ ಬೇಡಿಕೆ ಕೊನೆಗೂ ಈಡೇರಿದೆ.
ಶಾಲೆ ಕಾಲೇಜು ವಿದ್ಯಾರ್ಥಿಗಳು ಹಾಗೂ ತಮಟೆಬೈಲ್ ಗ್ರಾಮಸ್ಥರಿಗೆ ಅನುಕೂಲವಾಗಲು ಮೂಡಿಗೆರೆಯಿಂದ ತಮಟೆಬೈಲ್ ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಿಕೊಟ್ಟ ಶಾಸಕಿ ನಯನ ಮೋಟಮ್ಮ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ..\
ಗುರುವಾರ ಬೆಳಿಗ್ಗೆ ಗ್ರಾಮಸ್ಥರು ನೂತನವಾಗಿ ಸಂಚರಿಸುವ ಬಸ್ಸಿಗೆ ಪೂಜೆ ಸಲ್ಲಿಸಿದರು. ಬಳಿಕ ಗೋಣಿಬೀಡು ಗ್ರಾ.ಪಂ. ಸದಸ್ಯ ದೀಪಕ್ ಮಾತನಾಡಿ, ಈ ಕುಗ್ರಾಮಕ್ಕೆ ಇತಿಹಾಸದಲ್ಲಿಯೇ ಸಾರಿಗೆ ಸೌಲಭ್ಯ ಕಂಡಿರಲಿಲ್ಲ. ಗ್ರಾಮದಲ್ಲಿ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳು, ವೃದ್ದರು, ಮಹಿಳೆಯರು ಜಿ.ಹೊಸಳ್ಳಿವರೆಗೆ ದಟ್ಟ ಅರಣ್ಯದ ನಡುವೆ 3 ಕಿಮೀ ನಡೆದುಕೊಂಡು ಹೋಗಿ ಬಸ್ಸಿನಲ್ಲಿ ಸಂಚಾರಿಸುವಂತಾಗಿತ್ತು. ಅಲ್ಲದೇ ಕಾಡಾನೆಗಳ ಹಾವಳಿಯಿಂದ ಜೀವ ಭಯದಲ್ಲಿಯೇ ತಿರುಗಾಡುವ ಸ್ಥಿತಿ ಎದುರಾಗಿತ್ತು. ಹಾಗಾಗಿ ಈ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಶಾಸಕಿ ನಯನಾ ಮೋಟಮ್ಮ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಒಂದೆ ವಾರದಲ್ಲಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿಕೊಟ್ಟಿರುವುದು ಹರ್ಷ ತಂದಿದೆ ಎಂದು ಹೇಳಿದರು.
ಗ್ರಾ.ಪಂ. ಸದಸ್ಯರಾದ ಸುಧಾಮಣಿ, ರಘು, ಕಾಂಗ್ರೆಸ್ ಹಿರಿಯ ಮುಖಂಡ ಶೇಷೇಗೌಡ, ಗ್ರಾಮಸ್ಥರಾದ ರಮೇಶ್, ಹರೀಶ್, ಮಹೇಶ್, ರಾಜು ಮತ್ತಿತರರಿದ್ದರು.



