ಕಾಫಿ ಬೆಳೆಗಾರರು ತಮ್ಮ ತೋಟಗಳಿಗೆ ಕಾರ್ಮಿಕ ವಿಮೆ ಮಾಡಿಸಲು ಮೊದಲ ಆದ್ಯತೆ ನೀಡಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಬಿ. ಶಿವಣ್ಣ ಹಳಸೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ; ಕಾಫಿ ತೋಟಗಳಲ್ಲಿ ಈಗ ಮರಗಸಿ, ಕಾಳುಮೆಣಸು ಕೊಯ್ಲಿನಂತಹ ಕೆಲಸಗಳು ಪ್ರಾರಂಭವಾಗುತ್ತಿದ್ದು, ಇಂತಹ ಕೆಲಸಗಳನ್ನು ಮಾಡುವಾಗ ಕಾರ್ಮಿಕರ ಸುರಕ್ಷತೆ ಬಹು ಮುಖ್ಯವಾಗಿರುತ್ತದೆ. ಕಾರ್ಮಿಕರ ಹಿತರಕ್ಷಣೆ ಮತ್ತು ಬೆಳೆಗಾರರು ನಷ್ಟದಿಂದ ಪಾರಾಗುವುದನ್ನು ತಪ್ಪಿಸಲು ಪ್ರತಿಯೊಬ್ಬ ಬೆಳೆಗಾರರು ತಮ್ಮ ತೋಟಗಳಿಗೆ ಕಾರ್ಮಿಕ ವಿಮೆ ಮಾಡಿಸಬೇಕು.
ಕಾಫಿ, ಅಡಿಕೆ, ಕಾಳುಮೆಣಸು ಕೃಷಿಯಲ್ಲಿ ವರ್ಷವಿಡೀ ಒಂದಲ್ಲ ಒಂದು ಕೆಲಸ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರು ಕೆಲವೊಂದು ಅಪಾಯಕಾರಿ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಪ್ರತಿವರ್ಷ ಅನೇಕ ಅವಘಡಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ವಿಮೆ ಇಲ್ಲದೇ ಅನೇಕ ಕಾರ್ಮಿಕ ಕುಟುಂಬಗಳು ಮತ್ತು ಬೆಳೆಗಾರರು ತೊಂದರೆಗೆ ಒಳಗಾಗುತ್ತಿದ್ದಾರೆ.
ತೋಟಗಳಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿ ಕಾರ್ಮಿಕರು ಗಾಯಗೊಂಡರೆ ಅಥವಾ ಮೃತಪಟ್ಟರೆ ಅವರ ಕುಟುಂಬವು ತೊಂದರೆಗೆ ಸಿಲುಕುತ್ತದೆ. ಅಂತಹ ಸಂದರ್ಭದಲ್ಲಿ ತೋಟದ ಮಾಲೀಕರು ನಷ್ಟ ಭರಿಸಿಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕ ವಿಮೆ ಇದ್ದರೆ ಕಾರ್ಮಿಕರ ಕುಟುಂಬಕ್ಕೂ ಭದ್ರತೆ ಸಿಗುತ್ತದೆ ಮತ್ತು ಬೆಳೆಗಾರರು ಹಣಕಳೆದುಕೊಳ್ಳುವ ಸಂಭವ ತಪ್ಪುತ್ತದೆ.
ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬೆಳೆಗಾರರು ತಪ್ಪದೇ ಕಾರ್ಮಿಕ ವಿಮೆ ಮಾಡಿಸಿವ ಕಡೆಗೆ ಗಮನ ಹರಿಸಬೇಕು ಎಂದು ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಅವರು ಕರೆ ನೀಡಿದ್ದಾರೆ.



