ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ, ಶ್ರೀ ಸಂಚಿಹೊನ್ನಮ್ಮ ಮಹಿಳಾ ಮಂಡಳಿ ಹಾಗೂ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಸಂಯುಕ್ತಾಶ್ರಯಲ್ಲಿ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಇಂದು ಮಾರ್ಚ್ 8 ರಂದು ಬೆಳಗ್ಗೆ 10 ಗಂಟೆಗೆ 117 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಸಬಲರಾದರೆ ಮನೆ ಹಾಗೂ ಸಮಾಜ ಉತ್ತಮ ಸ್ಥಿತಿಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ಹಿಂದಿನಿಂದಲೂ ಮಹಿಳಾ ಒಕ್ಕೂಟದ ಮೂಲಕ ಮಹಿಳೆಯರ ಅಭಿವೃದ್ದಿಗಾಗಿ ಹೋರಾಟ ಹಾಗೂ ಶ್ರಮಿಸುತ್ತಾ ಬರಲಾಗಿದೆ. ಆದರೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನೂ ಕಡಿಮೆಯಾಗದಿರುವುದು ಆತಂಕಕಾರಿ ವಿಚಾರವಾಗಿದೆ. ಹಾಗಾಗಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಮಹಿಳಾ ದಿನಾಚರಣೆ ನಡೆಸಿ ಮಹಿಳೆಯನ್ನು ಒಗ್ಗೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಶ್ರೀ ಸಂಚಿ ಹೊನ್ನಮ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಟಿ.ಕಮಲಾಕ್ಮಮ್ಮ ಮಾತನಾಡಿ, ಮಹಿಳೆಯರು ಸಂಘಟನಾತ್ಮಕವಾಗಿರಲು ಪ್ರತಿ ವರ್ಷ ಗ್ರಾಮಾಂತರ ಪ್ರದೇಶದಲ್ಲಿ ಆಚರಿಸಲಾಗಿದೆ. ಈ ಬಾರಿಯೂ ಮಾ.1ರಿಂದ 7ರವೆಗೆ ಪಟ್ಟಣದ ಬಾಲಕೀಯರ ವಿದ್ಯಾರ್ಥಿನಿಲಯ. ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ, ಹಾಲೂರು ಕೂಡಿಗೆ, ಬೆಟ್ಟಗೆರೆ, ನಿಡುವಾಳೆ, ಮರಸಣಿಗೆ, ದಾರದಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಿಳಾ ದಿನಾಚರಣೆ ನಡೆಸಿದ್ದು, ಮಾ.8ರಂದು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಸಿ ಮೀನಾ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವೆ ಮೋಟಮ್ಮ, ಎಸ್‍ಪಿ ವಿಕ್ರಂ ಅಮಟೆ, ಜಿ.ಪಂ. ಸಿಇಒ ಕೀರ್ತನಾ, ವಕೀಲ ಸುಧೀರ್ ಕುಮಾರ್ ಮುರೋಳಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂ ಉಪಸ್ಥಿತರಿದ್ದರು.



