ಚಿಕ್ಕಮಗಳೂರು ನಗರ ಸಮೀಪದ ತೇಗೂರು ಗ್ರಾಮದಲ್ಲಿರುವ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಇಬ್ಬರು 9ನೇ ತರಗತಿಯ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ. ತರುಣ್ ಮತ್ತು ಯಶ್ವಿತ್ ಸಾಲಿಯಾನ್ ಎಂಬುವವರು ನಾಪತ್ತೆಯಾಗಿರುವ ವಿದ್ಯಾರ್ಥಿಗಳು.
ನಾಪತ್ತೆಯಾದ ವಿದ್ಯಾರ್ಥಿಗಳು ಕಳೆದ 10 ದಿನಗಳ ಹಿಂದೆ ಮಧ್ಯರಾತ್ರಿ ಶಾಲೆಯಿಂದ ಕಾಣೆಯಾಗಿದ್ದಾರೆ. ಅವರು ಮನೆಗೂ ತೆರಳಿಲ್ಲ, ಸಂಬಂಧಿಕರ ಮನೆಗೂ ತೆರಳಿಲ್ಲ. ಬಾಲಕರು ಎಲ್ಲಿಗೆ ತೆರಳಿರಬಹುದು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದವನಾದರೆ ಮತ್ತೋರ್ವ ವಿದ್ಯಾರ್ಥಿ ಬೆಂಗಳೂರು ಮೂಲದವನು ಅವರ ತಾಯಿಯ ಮನೆ ಚಿಕ್ಕಮಗಳೂರು ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳ ನಾಪತ್ತೆ ಸುದ್ದಿಯಿಂದ ಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಮಾರ್ಚ್ 3ರಂದೇ ಈ ವಿದ್ಯಾರ್ಥಿಗಳು ವಸತಿ ಶಾಲೆಯಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಲಾ ಆಡಳಿತ ಮಂಡಳಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ ಘಟನೆ ನಡೆದು ಹತ್ತು ದಿನವಾದರೂ ಮಾಧ್ಯಮಗಳಿಗೆ ಸುದ್ದಿ ತಲುಪಿಸಿಲ್ಲ. ಪ್ರಕರಣದ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಮಾಹಿತಿ ದೊರಕಿದ್ದು, ಇದೀಗ ಮಂಗಳೂರಿನಲ್ಲಿ ವಿದ್ಯಾರ್ಥಿ ನಾಪತ್ತೆಯಾಗಿ ಹತ್ತು ದಿನಗಳ ನಂತರ ಪತ್ತೆಯಾಗಿರುವ ಘಟನೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿರುವುದು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕಾಫಿನಾಡಿನಲ್ಲಿ ಇಬ್ಬರು ಬಾಲಕರ ನಾಪತ್ತೆ ಘಟನೆ ಬೆಚ್ಚಿಬೀಳಿಸಿದೆ.
ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ವಿದ್ಯಾರ್ಥಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ. ಬಾಲಕರು ನಾಪತ್ತೆಯಾದ ದಿನದ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿದ್ದು, ಬಾಲಕರು ಹಾಸ್ಟೆಲ್ ನಿಂದ ರಾತ್ರಿ ಹೊರಹೋಗುತ್ತಿರುವುದು ಮತ್ತು ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂದು ಬಸ್ಸಿಗಾಗಿ ವಿಚಾರಿಸುತ್ತಿರುವ ದೃಶ್ಯಗಳು ಪತ್ತೆಯಾಗಿವೆ.

ಹಾಗಾದರೆ ಹತ್ತು ದಿನಗಳಾದರೂ ವಿದ್ಯಾರ್ಥಿಗಳು ನಾಪತ್ತೆಯಾಗಿ ಎಲ್ಲಿಗೆ ಹೋಗಿದ್ದಾರೆ ಎಂಬುದು ಪ್ರಶ್ನಾರ್ಥಕವಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ವಿದ್ಯಾರ್ಥಿಗಳ ಪತ್ತೆಗೆ ಕ್ರಮ ವಹಿಸಬೇಕು ಎಂದು ಬಾಲಕರ ಸಂಬಂಧಿಕರು ಒತ್ತಾಯಿಸಿದ್ದಾರೆ. ಬಾಲಕರು ಹಾಸ್ಟೆಲ್ ನಿಂದ ತಪ್ಪಿಸಿಕೊಂಡು ಹೋಗಿರುವುದಕ್ಕೆ ವಸತಿ ನಿಲಯದ ಮೇಲ್ವಿಚಾರಕರ ಕರ್ತವ್ಯ ಲೋಪ, ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.



