ಕಳೆದ 8 ವರ್ಷದ ಹಿಂದೆ ನಿವೇಶನಕ್ಕಾಗಿ ಕಾಯ್ದಿರಿಸಿದ್ದ ಜಮೀನಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಹಳೇಮೂಡಿಗೆರೆ ಗ್ರಾ.ಪಂ. ಹಿಂದೇಟು ಹಾಕುವ ಜತೆಗೆ ದಾರಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿಲ್ಲ ಎಂದು ವಸತಿಗಾಗಿ ಹೋರಾಟ ವೇದಿಕೆ ವತಿಯಿಂದ ಅನಿರ್ಧಿಷ್ಟಾವದಿ ಧರಣಿ ಹಮ್ಮಿಕೊಳ್ಳಲಾಗಿದೆ. ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆ ಎರಡನೇ ದಿನದ ಧರಣಿ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯೋರ್ವರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ಧರಣಿಯಲ್ಲಿ ಪಾಲ್ಗೊಂಡಿದ್ದ ಹಳೇಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಸರ್ವೋದಯನಗರದ ಕೂಲಿ ಕಾರ್ಮಿಕ ಮಹಿಳೆ ಗೋಪಿ (55) ಬಿಸಿಲಿನ ತಾಪಕ್ಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಪಟ್ಟಣದ ಎಂಜಿಎಂ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಬಿ.ರುದ್ರಯ್ಯ ; ಕಳೆದ 8 ವರ್ಷದ ಹಿಂದೆ ನಮ್ಮ ವೇದಿಕೆಯಿಂದಲೇ ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂ.7ರಲ್ಲಿ ಕಂದಾಯ ಭೂಮಿಯನ್ನು ಪತ್ತೆ ಹಚ್ಚಿ ಸುಮಾರು 200 ಕುಟುಂಬ ಗುಡಿಸಲು ನಿರ್ಮಿಸಿ ಹೋರಾಟ ನಡೆಸಲಾಯಿತು. ಇದರಿಂದ ಒತ್ತುವರಿದಾರರ ನಡುವೆ ಸಂಘರ್ಷ ಕೂಡ ನಡೆಯಿತು. ನಂತರ ಜಿಲ್ಲಾಡಳಿತ ಸರ್ವೆ ನಡೆಸಿದಾಗ 7.30 ಗುಂಟೆ ಕಂದಾಯ ಭೂಮಿ ಎಂದು ಸಾಬೀತಾಯಿತು. ಅದರಲ್ಲಿ 4.30 ಎಕರೆ ಆಶ್ರಯ ನಿವೇಶನಕ್ಕೆ ಕಾಯ್ದಿಸಲಾಯಿತು. ಆ ಸ್ಥಳಕ್ಕೆ ಗ್ರಾ.ಪಂ.ಯಿಂದ ಕುಡಿಯುವ ನೀರಿನ ವ್ಯವಸ್ಥೆ, ಶಾಸಕರ ಅನುದಾನದಿಂದ ಗಿಡಗಂಟಿಗಳನ್ನು ತೆರವು ಮಾಡಲಾಗಿದೆ. ಆದರೆ ಇದೂವರೆಗೂ ರಸ್ತೆ ನಿರ್ಮಿಸಿಲ್ಲ. ಜತೆಗೆ ಫಲಾನುಭವಿಗಳ ಪಟ್ಟಿ ತಯಾರಿಸಿಲ್ಲ ಎಂದು ದೂರಿದರು.
ಕೂಡಲೇ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಲು ಗ್ರಾಮಸಭೆ ಕರೆಯಲು ದಿನ ನಿಗದಿಪಡಿಸಬೇಕು. ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವಾಗ ಹೋರಾಟದಲ್ಲಿ ಪಾಲ್ಗೊಂಡಿರುವ ಸ್ಥಳೀಯರನ್ನು ಆಯ್ಕೆ ಮಾಡಬೇಕು. ಅಲ್ಲದೆ ಫಲಾನುಭವಿಗಳ ಆಯ್ಕೆಯಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆಯನ್ನು ಪರಿಗಣಿಸದೇ ಭ್ರಷ್ಟಾಚಾರ ರಹಿತ ಪಾರದರ್ಶಕವಾದ ಆಯ್ಕೆ ನಡೆಯಬೇಕು. ಆ ಜಾಗಕ್ಕೆ ಜೈಭೀಮ್ ನಗರವೆಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದ ಅವರು ಸ್ಥಳಕ್ಕೆ ತಹಸೀಲ್ದಾರ್ ಬಂದು ಸಮಸ್ಯೆ ಬಗೆಹರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಗುರುವಾರ ಸ್ಥಳಕ್ಕೆ ತಾ.ಪಂ. ಇಒ ಬೇಟಿ ನೀಡಿ ಮಾ.18ರಂದು ಗ್ರಾಮಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದಾರೆ. ತಾಲೂಕು ಕಚೇರಿಯಿಂದ ಆರ್‍ಐ ಚಂದ್ರು ಆಗಮಿಸಿ ರಸ್ತೆ ಮಾಡಲು ಭೂಸ್ವಾದೀನಪಡಿಸಿಕೊಳ್ಳುವ ಕಥೆ ಹೇಳಿ ಹೋಗಿದ್ದಾರೆ. ಇಲ್ಲಿ ನಡೆಯುತ್ತಿರುವ ಧರಣಿ ಸ್ಥಳ ತಾಲೂಕು ಕಚೇರಿಗೆ ಕೇವಲ 1 ಕಿ,ಮೀ ಕೂಡ ಇಲ್ಲ. ಆದರೂ ತಹಸೀಲ್ದಾರರು ಆಗಮಿಸದಿರುವುದು ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಹಿಂಪಡೆಯುವ ಮಾತೇ ಇಲ್ಲ. ಮಾ.18ರವರೆಗೆ ಧರಣಿ ಮುಂದುವರೆಸುತ್ತೇವೆ. ಅಂದು ನಡೆಯುವ ಗ್ರಾಮಸಭೆ ಕಾಟಾಚಾರಕ್ಕೆ ನಡೆಸಿದರೆ ಹಾಗೂ ಸಮಸ್ಯೆ ಬಗೆಹರಿಸದಿದ್ದರೆ ತಿಂಗಳಾದರೂ ಸರಿ, ವರ್ಷ ಕಳೆದರೂ ಸರಿ ನಮ್ಮ ಬೇಡಿಕೆ ಈಡೇರಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ. ಈಗಾಗಲೇ ಬಿಸಿಲಿನ ತಾಪಕ್ಕೆ ಓರ್ವ ಮಹಿಳೆ ಕುಸಿದು ಬಿದಿದ್ದಾರೆ. ಇದು ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಬಿಸಿಲಿನಿಂದ ಧರಣಿಯಲ್ಲಿ ಪಾಲ್ಗೊಂಡ ನಿವೇಶನ ರಹಿತರಿಗೆ ಆರೋಗ್ಯದಲ್ಲಿ ತೊಂದರೆಯಾದರೆ ಅದರ ಹೊಣೆ ತಾಲೂಕು ಆಡಳಿತ ಮತ್ತು ಹಳೇಮೂಡಿಗೆರೆ ಗ್ರಾಪ.ಂ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ಜಾನಕಿ, ಆಯಿಷಾಬಾನು, ಉನೈಸಾ, ಶಾರದಾ, ವನಜಾ, ಚಂದ್ರುಶೆಟ್ಟಿ, ರಾಮು, ಶೇಖರ್, ಮಂಜುಳಾ, ಯಶೋಧ, ಪ್ರಮಿಳಾ, ನಾಗಮ್ಮ, ಗೀತಾ, ಲಲಿತಾ ಗೋಪಿ ಮತ್ತಿತರರಿದ್ದರು.
ಧರಣಿಯಲ್ಲಿ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ಗೋಣಿಬೀಡು ಗ್ರಾ.ಪಂ. ಸದಸ್ಯ ಕೃಷ್ಣ, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ರಾಜೇಶ್, ರವಿ, ರಮೇಶ್, ರಾಮು ಛತ್ರಮೈಧಾನ, ಶೇಖರ್, ಜಾನಕಿ, ಆಯಿಷಾಬಾನು, ಫಾತೀಮಾ, ಜೋಹಾರ, ರುಕ್ಮಿಣಿ, ಗೀತಾ, ವಿನೋಧ, ಸುಮಯ್ಯ, ಪ್ರಮಿಳಾ, ರಾಧಾ, ರತ್ನಮ್ಮ, ಉನೈಸಾ, ಶಾರದಾ, ವನಜಾ, ಮಂಜುಳಾ, ಯಶೋಧ, ನಾಗಮ್ಮ, ಲಲಿತಾ ಮತ್ತಿತರರಿದ್ದರು.



