ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಬುಧವಾರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಬಂಧಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ನಿನ್ನೆ ಶಿವಮೊಗ್ಗದಲ್ಲಿ ಮಂಜುನಾಥ್ ಗೌಡ ಮನೆ, ಕಚೇರಿ ಸೇರಿದಂತೆ 8 ಕಡೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ನಡೆಸಿದ್ದರು.
ಹೆಚ್ಚಿನ ವಿಚಾರಣೆಗಾಗಿ ಮಂಜುನಾಥ್ ಗೌಡ ಅವರನ್ನು ಇಂದು ಅಧಿಕೃತವಾಗಿ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ 1ನೇ ಸಿಸಿಹೆಚ್ ನ್ಯಾಯಾಲಯ, ಆರೋಪಿಯನ್ನು 14 ದಿನ ಇಡಿ ಕಸ್ಟಡಿಗೆ ನೀಡಿದೆ.
ಮಂಜುನಾಥ ಗೌಡಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಅಗತ್ಯ ವೈದ್ಯಕೀಯ ಸವಲತ್ತು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ ಮತ್ತು ದಿನದಲ್ಲಿ 30 ನಿಮಿಷ ವಕೀಲರಿಂದ ಮಂಜುನಾಥ್ ಗೌಡ ಭೇಟಿಗೆ ಕೋರ್ಟ್ ಅವಕಾಶ ನೀಡಿದೆ.
ಕೋಟ್ಯಂತರ ರೂ. ಹಣ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಂಜುನಾಥ ಗೌಡ ಅವರನ್ನು ಎಸಿಬಿ ಬಂಧನ ಮಾಡಿತ್ತು. ಆದರೆ ಚಾರ್ಜ್ ಶೀಟ್‌ನಲ್ಲಿ ಮಂಜುನಾಥ್ ಗೌಡ ಹೆಸರನ್ನು ಕೈಬಿಡಲಾಗಿತ್ತು. ಬಳಿಕ ಇಡಿ ಇಸಿಐಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾಗಿತ್ತು.
ಇಡಿ ತನಿಖೆಗೆ ಮುಂದಾಗುತ್ತಿದ್ದಂತೆ ಮಂಜುನಾಥ್ ಗೌಡ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇಡಿ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿತ್ತು.
ಶೋಭಾ ಎಂಬುವವರು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಂದರ್ಭದಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಮಂಗಳವಾರ ದಾಳಿ ನಡೆದಿತ್ತು.



