ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕಾಫಿ ತೋಟಗಳು ಸರ್ವ ನಾಶವಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳನ್ನು ಸ್ಥಳಾಂತರಿಸದಿದ್ದರೆ ಸೋಮವಾರ ರೈತರೊಂದಿಗೆ ಸಭೆ ನಡೆಸಿ ಬಂದ್ ಕರೆ ನೀಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಗಬ್ಬಳ್ಳಿ ಚಂದ್ರೇಗೌಡ ಎಚ್ಚರಿಕೆ ನೀಡಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿನ ನಂದೀಪುರ ಹಾಗೂ ಮಾಕೋನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 42 ಕಾಡಾನೆಗಳು ಕಳೆದ 4 ದಿನದಿಂದ ಬೀಡು ಬಿಟ್ಟಿದ್ದು, ಈ ಭಾಗದ ಕಾರ್ ಬೈಲ್, ಮೂಡಸಸಿ, ಬಾರ್‍ದಳ್ಳಿ, ಚಟ್ನಳ್ಳಿ, ಸಂಗಮಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರ ಕಾಫಿ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಓಡಿಸದೇ ಸಂಜೆ ವಾಪಾಸು ತೆರಳುತ್ತಿದ್ದಾರೆ. ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಲ್ಲದೇ ರಾತ್ರಿ ಸಮಯದಲ್ಲಿ ಹೊರಗಡೆ ಜೀವಭಯದಿಂದ ತಿರುಗಾಡುವ ಸ್ಥಿತಿ ಉಂಟಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕಾಡಾನೆ ಹಾವಳಿಯಿಂದ ಮಾನವ ನಿರಂತರವಾಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮಾಕೋನಹಳ್ಳಿ ಹಾಗೂ ನಂದೀಪುರ ವ್ಯಾಪ್ತಿಯಲ್ಲಿ 2ರಿಂದ 5 ಎಕರೆ ಇರುವ ನೂರಾರು ಸಣ್ಣ ರೈತರ ಕಾಫಿ ತೋಟ ಸರ್ವ ನಾಶವಾಗಿದೆ. ಮೆಣಸು ಬೆಳೆ ಸಂಪೂರ್ಣ ಹಾನಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಆಡಳಿತ ಪಕ್ಷಗಳು ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದ ತಾಲೂಕಿನ ಜನರು ನಿರಂತರ ಸಂಕಷ್ಟ ಎದುರಿಸುವಂತಾಗಿದೆ.
ಈಗಾಗಲೇ ಬೆಳೆ ಕಳೆದುಕೊಂಡ ರೈತರಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ತಾಲೂಕಿನಲ್ಲಿರುವ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರಿಸಬೇಕು. ಜತೆಗೆ ತಾಲೂಕಿನಲ್ಲಿಯೇ ಆನೆ ಬಿಡಾರ ಸ್ಥಾಪಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಸುರೇಂದ್ರ ಹ್ಯಾರಗುಡ್ಡೆ, ರವಿ ಮಗ್ಗಲಮಕ್ಕಿ ಉಪಸ್ಥಿತರಿದ್ದರು.



