ಬಿಜೆಪಿ ನಾಯಕರು ರಾಜ್ಯಾದ್ಯಂತ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯ ಉದ್ದೇಶ ರಾಜಕೀಯ ಅಧಿಕಾರವೇ ಹೊರತು ಜನಪರ ಕಾಳಜಿ ಅಲ್ಲ, ಬಿಜೆಪಿಯ ಜನಾಕ್ರೋಶ ಯಾತ್ರೆಗೆ ಜನರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಅಧಿಕಾರ ಕಳೆದುಕೊಂಡಿರುವ ಹತಾಶೆಯಿಂದ ಬಿಜೆಪಿ ನಾಯಕರು ಯಾತ್ರೆ ಹೆಸರಿನಲ್ಲಿ ಜನಪರ ಆಡಳಿತ ನೀಡುತ್ತಿರುವ ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಆರೋಪಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಗುರುವಾರ ಚಿಕ್ಕಮಗಳೂರು ನಗರದಲ್ಲಿ ನಡೆದ ಬಿಜೆಪಿಯ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರಕಾರದ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಹಿಂದು ವಿರೋಧಿ ನೀತಿ ಜಾರಿ ಮಾಡುತ್ತಿದೆ ಎಂದಿರುವ ಅವರ ಆರೋಪ ಸತ್ಯಕ್ಕೆ ದೂರವಾಗಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಜನರ ಬದುಕು ಸುಧಾರಣೆ ನಿಟ್ಟಿನಲ್ಲಿ ಜನಪರ ಆಡಳಿತ ನೀಡುತ್ತಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಹಾಗೂ ಕೇಂದ್ರದ ಮೋದಿ ಸರಕಾರದ ಆಡಳಿತದಿಂದಾಗಿ ದೇಶ ಹಾಗೂ ರಾಜ್ಯದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿತ್ತು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಜೀವನ ನಡೆಸುವುದೇ ಕಷ್ಟವಾಗಿತ್ತು. ಬಿಜೆಪಿ ಸರಕಾರದ ಆಡಳಿತದಿಂದಾಗಿ ಕಾರ್ಮಿಕರು, ರೈತರು, ಬಡವರು, ಸಾಮಾನ್ಯ ಜನರು ನೆಮ್ಮದಿ ಜೀವನ ನಡೆಸಲು ಪರದಾಡುವಂತಾಗಿತ್ತು.
ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದವು. ಭಷ್ಟಾಚಾರ ಮಿತಿಮೀರಿ ಬಿಜೆಪಿ ಸರಕಾರಕ್ಕೆ 40 ಪರ್ಸೆಂಟ್ ಸರಕಾರ ಎಂಬ ಬಿರುದನ್ನು ಜನತೆ ನೀಡಿದ್ದರು. ಬಿಜೆಪಿ ಸರಕಾರದ ದುರಾಡಳಿತಕ್ಕೆ ಬೇಸತ್ತ ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ನೀಡುವ ಮೂಲಕ ಅಧಿಕಾರ ನೀಡಿದ್ದಾರೆ. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಜನರ ಬದುಕಿನ ಸುಧಾರಣೆಗಾಗಿ ಪಂಚಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿದೆ ಎಂದಿದ್ದಾರೆ.
ಪಂಚಗ್ಯಾರಂಟಿ ಯೋಜನೆಗಳು ರಾಜ್ಯದ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪುತ್ತಿದೆ. ಈ ಯೋಜನೆಗಳ ಯಶಸ್ಸಿನಿಂದ ಹತಾಶೆಯಿಂದ ನಲುಗಿ ಹೋಗಿರುವ ಬಿಜೆಪಿ ನಾಯಕರು ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಇನ್ನೆಂದೂ ಅಧಿಕಾರ ಸಿಗುವುದಿಲ್ಲ ಎಂಬುದು ಮನಗಟ್ಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ಪುಕ್ಕಟ್ಟೆ ಪ್ರಚಾರ ಪಡೆಯುತ್ತಿದ್ದಾರೆ. ರಾಜ್ಯದ ಜನರಿಗೆ ಆಕ್ರೋಶ ಇರುವುದು ಬಿಜೆಪಿಯವರ ದುರಾಡಳಿತ, ಮೋದಿ ಸರಕಾರದ ಕಾರ್ಪೊರೆಟ್ ಕಂಪೆನಿಗಳ ಪರನಾದ ನಿಲುವಿನ ವಿರುದ್ಧವೇ ಹೊರತು ಜನಪರ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಸರಕಾರದ ವಿರುದ್ಧ ಅಲ್ಲ ಎಂದು ಟೀಕಿಸಿದ್ದಾರೆ.
ರಾಜ್ಯವನ್ನು ಸರ್ವ ಜನರ ಶಾಂತಿಯ ತೋಟವನ್ನಾಗಿಸುವುದು ಕಾಂಗ್ರೆಸ್ ಸರಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ದಲಿತರು, ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಸಮುದಾಯದವರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಆಡಳಿತ ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಒಂದು ಧರ್ಮ, ಜಾತಿಯ ಜನರಿಗೆ ನೀಡುತ್ತಿಲ್ಲ, ರಾಜ್ಯದ ಎಲ್ಲ ಜಾತಿ, ಧರ್ಮದವರಿಗೂ ಈ ಯೋಜನೆಗಳು ಜಾತ್ಯತೀತವಾಗಿ ತಲುಪುತ್ತಿವೆ. ಬಿಜೆಪಿ ಪಕ್ಷದವರಿಗೂ ಪಂಚಗ್ಯಾರAಟಿ ಯೋಜನೆಗಳು ತಲುಪುತ್ತಿವೆ ಎಂದ ಅವರು, ರಾಜ್ಯ ಸರಕಾರ ನುಡಿದಂತೆ ನಡೆದ ಸರಕಾರವಾಗಿದೆ ಎಂಬುದಕ್ಕೆ ಪಂಚಗ್ಯಾರAಟಿ ಯೋಜನೆಗಲ ಯಶಸ್ವಿ ಜಾರಿಯೇ ಸಾಕ್ಷಿ ಎಂದಿದ್ದಾರೆ.
ರಾಜ್ಯ ಸರಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಮೋದಿ ಸರಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬಾಯಿ ಬಿಡದಿರುವುದು ವಿಪರ್ಯಾಸ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲದರ ಕಡಿಮೆ ಇದ್ದರೂ ದೇಶದಲ್ಲಿ ಡೀಸೆಲ್, ಪೆಟ್ರೋಲ್ ದರ ನೂರು ರೂ, ಏರಿಕೆ ಮಾಡಲಾಗಿದೆ, ಅಡುಗೆ ಅನಿಲ ದರವನ್ನೂ ದುಪ್ಪಟ್ಟು ಮಾಡಲಾಗಿದೆ, ಬಿಜೆಪಿ ನಾಯಕರಿಗೆ ತಾಕತ್ತಿದ್ದರೇ ಮೋದಿ ಸರಕಾರದ ಈ ಬೆಲೆ ಏರಿಕೆ ನೀತಿ ವಿರುದ್ಧ ಧ್ವನಿ ಎತ್ತಲಿ ಎಂದು ಸವಾಲು ಹಾಕಿರುವ ಅವರು, ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಗೋಸುಂಬೆಗಳು, ಬಿಜೆಪಿ ಸರಕಾರದ ಅವಧಿಯಲ್ಲಿ ೨೫ಸಾವಿರ ಕೋಟಿ ಪರಿಶಿಷ್ಟರ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ರಾಜ್ಯದ ಜನರಿಗೆ ತಿಳಿದಿದ್ದು, ರಾಜ್ಯ ಸರಕಾರ ದಲಿತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು, ಪರಿಶಿಷ್ಟರ ಕಲ್ಯಾಣಕ್ಕಾಗಿ ಸಾವಿರಾರು ಕೋ. ರೂ. ಅನುದಾನವನ್ನು ಮೀಸಲಿಟ್ಟಿರುವುದನ್ನು ಬಿಜೆಪಿ ನಾಯಕರು ಗಮನಿಸಬೇಕು ಎಂದಿದ್ದಾರೆ.
ವಿಪ ಸದಸ್ಯ ಸಿ.ಟಿ.ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 4 ಬಾರಿ ಶಾಸಕರಾಗಿದ್ದು, ಮಂತ್ರಿಯೂ ಆಗಿದ್ದರು, ಅವರ ಅಧಿಕಾರವಧಿಯಲ್ಲಿ ಚಿಕ್ಕಮಗಳೂರು ಕ್ಷೇತ್ರವನ್ನು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಲಾಯಿತೇ ಹೊರತು, ಚಿಕ್ಕಮಗಳೂರು ಕ್ಷೇತ್ರವಾಗಲೀ, ಜಿಲ್ಲೆಯಲ್ಲಾಗಲೀ ಅಭಿವೃದ್ಧಿಯಾಗಲೇ ಇಲ್ಲ, ಬದಲಿಗೆ ಸಿ.ಟಿ.ರವಿಗೆ ಕೋಟಿ ರವಿ ಎಂಬ ಬಿರುದು ಪಡೆದುಕೊಂಡರು. ಈ ಬಿರುದು ಬರುತ್ತಿದ್ದಂತೆ ಅವರು ಅಧಿಕಾರವನ್ನೂ ಕಳೆದುಕೊಂಡಿದ್ದಾರೆ. ಸಿ.ಟಿ.ರವಿ ಶಾಸಕ ಸ್ಥಾನ ಕಳೆದುಕೊಂಡು ೨ವರ್ಷ ಕಳೆಯುತ್ತಿದ್ದರೂ ಇಂದಿಗೂ ಅವರು ಹತಾಶೆಯಿಂದ ಹೊರ ಬಂದಿಲ್ಲ. ಸಿ.ಟಿ.ರವಿ ಅವರ ಕೋಮುವಾದಿ ಉದ್ರೇಕದ ಮಾತುಗಳಿಂದಲೇ ಅವರು ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವುದನ್ನು ಅವರು ನಿಲ್ಲಿಸದಿದ್ದಲ್ಲಿ ಅನಂತಕುಮಾರ ಹೆಗ್ಡೆ, KS ಈಶ್ವರಪ್ಪ, ಯತ್ನಾಳ್,ರೇಣುಕಾಚಾರ್ಯ ರನ್ನು ಜನತೆ ರಾಜಕೀಯವಾಗಿ ಮೂಲೆ ಗುಂಪು ಮಾಡಿದಂತೆ ದಿನ ಕೂಡ ದೂರ ಇಲ್ಲ ಎಂದು ಟೀಕಿಸಿದ್ದು, ಬಿಜೆಪಿಯವರ ಜನಾಕ್ರೋಶ ಯಾತ್ರೆಗೆ ಜನರ ಸ್ಪಂದನೆ ಎಲ್ಲೂ ಸಿಗುತ್ತಿಲ್ಲ, ಬದಲಿಗೆ ಜನರಿಂದಲೇ ಬಿಜೆಪಿ ಪಟಾಲಂ ಯಾತ್ರೆ ವಿರುದ್ಧವೇ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದ್ದಾರೆ.



