ದೇಶಕ್ಕೆ ಅನ್ನ ಕೊಡುವ ರೈತರಿಗೆ ಪ್ರೋತ್ಸಾಹವಾಗಿ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಿದ್ದ ಫಾರಂ 50 ಮತ್ತು 53 ಮಂಜೂರಾತಿಗಳನ್ನು ಕಾಂಗ್ರೆಸ್ ಸರಕಾರ ರದ್ದುಗೊಳಿಸುವ ಮೂಲಕ ಮಲೆನಾಡಿನ ರೈತರ ಮೇಲೆ ಗದಪ್ರಹಾರ ನಡೆಸುತ್ತಿರುವ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಮೂಡಿಗೆರೆ ತಾಲೂಕು ವಕ್ತಾರ ವಿನಯ್ ಹಳೆಕೋಟೆ ತಿಳಿಸಿದ್ದಾರೆ.
ಅವರು ಬುಧವಾರ ಹೇಳಿಕೆಯಲ್ಲಿ ತಿಳಿಸಿ, ಕೃಷಿಯಿಂದ ಜನರು ಹಿಂದೆ ಸರಿಯುತ್ತಿದ್ದ ಸಮಯದಲ್ಲಿ ರೈತರು ಕೃಷಿ ಮಾಡಬೇಕೆಂಬ ದೃಷ್ಟಿಯಿಂದ ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಫಾರಂ 50 ಮತ್ತು 53ಯಲ್ಲಿ ಅರ್ಜಿ ಹಾಕಿದ ರೈತರಿಗೆ ಹಕ್ಕುಪತ್ರ ನೀಡಲಾಗಿತ್ತು. ಇದರಿಂದ ತಮ್ಮ ಜೀವನೋಪಾಯಕ್ಕೆ 2ರಿಂದ 4 ಎಕರೆ ಇರುವ ಸಣ್ಣ ರೈತರು ತಮ್ಮ ಭೂಮಿಯನ್ನು ಹಸನಾಗಿಸಿ ಇಲ್ಲಿ ಬೆಳೆಯುವ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಮತ್ತಿತರ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತನನ್ನು ಭೂಗಳ್ಳರಂತೆ ಬಿಂಬಿಸುವ ಮೂಲಕ ತಾಲೂಕಿನಲ್ಲಿರುವ ರೈತರ ಭೂಮಿ ಕಿತ್ತುಕೊಂಡು ಬೀದಿಗೆ ತಳ್ಳುವ ಕಾರ್ಯ ಇದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ದೂರಿದ್ದಾರೆ.
ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ಸರಕಾರವೇ ನೀಡಿದ ಸಾವಿರಾರು ಮಂದಿ ರೈತರ ಭೂಮಿಯ ಹಕ್ಕುಪತ್ರ ವಜಾ ಗೊಳಿಸಲಾಗಿದೆ. ಮುಖ್ಯವಾಗಿ ನಿಯಮ ಪ್ರಕಾರವೇ ಮಂಜೂರಾಗಿದ್ದ 2ರಿಂದ 4 ಎಕರೆ ಭೂಮಿ ಹೊಂದಿರುವ ರೈತರ ಹಕ್ಕುಪತ್ರವನ್ನೇ ಹೆಚ್ಚಾಗಿ ವಜಾಗೊಳಿಸಲಾಗಿದೆ. ತಮ್ಮ ಜೀವನೋಪಾಯಕ್ಕಾಗಿ ಬಳಸಿಕೊಳ್ಳುತ್ತಿದ್ದ ಭೂಮಿಯನ್ನು ಈಗ ಇದ್ದಕ್ಕಿದಂತೆ ಕಿತ್ತುಕೊಂಡರೆ ಸಣ್ಣ ರೈತರು ಬದುಕುವುದಾದರೂ ಹೇಗೆ ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ರೈತರ ನೈಜ ಪರಿಸ್ಥಿತಿ ಬಗ್ಗೆ ಶಾಸಕರು ಸರಕಾರದ ಗಮನ ಸೆಳೆದು ರೈತರಿಗಾಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ.



