ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಎಸಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಅಪಘಾತ ಎಸಗಿ ಲಾರಿ ಚಾಲಕ ಪರಾರಿಯಾಗಿದ್ದ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಕ್ರಾರವಾಡಿ ಗ್ರಾಮದ ಮಧುಕರ ಸೋಮವಂಶಿ ಅಪಘಾತ ಎಸಗಿ ಪರಾರಿಯಾಗಿದ್ದ ಲಾರಿ ಚಾಲಕ. ಅಪಘಾತ ಎಸಗಿದ ಲಾರಿಯನ್ನೂ ಸಹ ಕಿತ್ತೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಜನವರಿ 14 ರಂದು ಬೆಳಗ್ಗಿನ ಜಾವ ಹೆಬ್ಬಾಳ್ಕರ್ ಕಾರಿಗೆ ತಾಗಿಸಿ ಲಾರಿ ಚಾಲಕ ಪರಾರಿಯಾಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವೂ ಸಹ ಆಗಿತ್ತು. ಈ ಕುರಿತು ಸಚಿವೆ ಹೆಬ್ಬಾಳ್ಕರ್ ಅವರ ಕಾರು ಚಾಲಕ ಶಿವಪ್ರಸಾದ್ ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದ ದೂರಿನ ಅನ್ವಯ ಪ್ರಕರಣದ ವಿಚಾರಣೆ ಆರಂಭಿಸಿದ್ದ ಕಿತ್ತೂರು ಠಾಣೆ ಪೊಲೀಸರು ಹಿರೇಬಾಗೇವಾಡಿ ಟೋಲ್ ಬಳಿಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ 60ಕ್ಕೂ ಹೆಚ್ಚು ಲಾರಿ ಚಾಲಕರ ವಿಚಾರಣೆ ನಡೆಸಿದ್ದರು.
ಮೊದಲಿಗೆ ಅಪಘಾತ ಎಸಗಿಲ್ಲ ಎಂದು ಲಾರಿ ಚಾಲಕ ಮಧುಕರ ಸೋಮವಂಶಿ ಹೇಳಿದ್ದಾನೆ. ಬಳಿಕ ಅಪಘಾತದಲ್ಲಿ ಭಾಗಿಯಾದ ವಾಹನದ ಬಣ್ಣ ಎಫ್‌ಸ್‌ಎಲ್‌ಗೆ ರವಾನೆ ಮಾಡಿದ್ದರು. ಅಲ್ಲದೇ ಘಟನೆ ವೇಳೆ ಫೋನ್ ಕಾಲ್ ಡೀಟೇಲ್ಸ್ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಿತ್ತೂರು ಪೊಲೀಸರ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



