ಕಾಡಾನೆಯೊಂದು ಮನೆಯವರನ್ನು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಸಮೀಪ ಬಾರದಹಳ್ಳಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ.
ಬಾರದಹಳ್ಳಿ ಗ್ರಾಮದ ಕಾಫಿ ಬೆಳೆಗಾರ ಯಶ್ವಂತ್ ಎಂಬುವವರ ಮನೆಯೊಳಗೆ ನುಗ್ಗಲು ಒಂಟಿಸಲಗವೊಂದು ಯತ್ನಿಸಿದೆ.
ಗುರುವಾರ ಮುಂಜಾನೆ 7-30ರ ಸಮಯದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ಮನೆಯೊಳಗೆ ನುಗ್ಗಲು ಬಂದಿರುವ ವಿಡಿಯೋ ಮನೆಯವರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬುಧವಾರ ರಾತ್ರಿಯೆಲ್ಲಾ ಯಶ್ವಂತ್ ಹಾಗೂ ಸುತ್ತಮುತ್ತಲಿನ ಮನೆಯವರ ಬಳಿ ಸಾಕಷ್ಟು ಹಾನಿ ಮಾಡಿದೆ. ಮನೆಯ ಸಮೀಪವಿದ್ದ ಪ್ಲಾಸ್ಟಿಕ್ ಬ್ಯಾರಲ್ ಸೇರಿದಂತೆ ಅನೇಕ ಪರಿಕರಗಳನ್ನು ಪುಡಿಮಾಡಿದೆ. ಬಾಳೆಗಿಡಗಳನ್ನು ತಿಂದಿದ್ದು, ಕಾಫಿಗಿಡಗಳನ್ನು ನಾಶಪಡಿಸಿದೆ. ರಾತ್ರಿಯೆಲ್ಲಾ ಮನೆಯವರು ಭಯದಿಂದ ಕಾಲ ಕಳೆದಿದ್ದಾರೆ. ರಾತ್ರಿ ಹಾವಳಿ ಮಾಡಿದ್ದ ಆನೆ ಮುಂಜಾನೆ ಕಾಡಿಗೆ ತೆರಳಿರಬಹುದು ಎಂದು ಮನೆಯವರು ಹೊರಗೆ ಬಂದಾಗ ಒಂಟಿ ಸಲಗ ಮನೆಯ ಸಮೀಪದಲ್ಲಿಯೇ ನಿಂತಿರುವುದು ಕಂಡುಬಂದಿದೆ. ಮನೆಯವರು ಬೊಬ್ಬೆ ಹಾಕಿದಾಗ ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಮನೆಯ ಹಿಂಭಾಗದಿಂದ ಒಳಗೆ ನುಗ್ಗಲು ಯತ್ನಿಸಿದೆ. ಮನೆಯ ಬಾಗಿಲಿನವರೆಗೆ ಬಂದು ಹಿಂದಿರುಗಿದೆ. ಭಯಭೀತರಾಗಿ ಮನೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿಕೊಂಡಿದ್ದಾರೆ. ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ನಂದೀಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ನಲವತ್ತಕ್ಕೂ ಅಧಿಕ ಆನೆಗಳು ಹಾವಳಿ ನಡೆಸುತ್ತಿವೆ. ಆನೆಗಳ ಗುಂಪು ಚದುರಿ ಹೋಗಿದ್ದು, ಒಂದೊಂದು ಗುಂಪು ಒಂದೊಂದು ಗ್ರಾಮದ ಕಡೆ ಲಗ್ಗೆ ಇಡುತ್ತಿವೆ. ಹಗಲು ರಾತ್ರಿ ಎನ್ನದೇ ಗ್ರಾಮದೊಳಗೆ ಸುತ್ತುತ್ತುವೆ. ಅರಣ್ಯ ಇಲಾಖೆಯವರ ಯಾವ ಪ್ರಯತ್ನಗಳು ಆನೆಗಳನ್ನು ಇಲ್ಲಿಂದ ಬೇರೆಡೆಗೆ ಓಡಿಸಲು ಯಶಸ್ಸು ಕಾಣುತ್ತಿಲ್ಲ. ಇದರಿಂದ ಜನರು ಭಯಭೀತರಾಗಿದ್ದಾರೆ.
ಇಂದು ಮುಂಜಾನೆ ನಡೆದಿರುವ ಘಟನೆ ಈ ಭಾಗದ ಜನರನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ಅರಣ್ಯ ಇಲಾಖೆಯವರು ಹೆಚ್ಚುವರಿ ಸಿಬ್ಬಂದಿ ಕರೆಸಿ ಇಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ದೂರದ ಕಾಡಿಗಟ್ಟುವ ಪ್ರಯತ್ನ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



