ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ಸೇರಿದಂತೆ ನಾಲ್ವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಕೇಶ್‌ಮಲ್ಲಿ, 2ನೇ ಪತ್ನಿ ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 173 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಿಕ್ಕಿ ರೈ ತಮ್ಮ ಫಾರ್ಚೂನರ್ ಕಾರಿನಲ್ಲಿ ಡ್ರೈವರ್ ಮತ್ತು ಗನ್‌ಮ್ಯಾನ್ ಜೊತೆಗೆ ಬಿಡದಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ 12:50ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಮನೆಯ ಕಾಂಪೌಂಡ್ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ರಿಕ್ಕಿ ರೈ ಅವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರ ಗಾಯಗೊಂಡಿದ್ದಾರೆ.
ಘಟನೆಯ ಸ್ಥಳಕ್ಕೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್‌ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದಾಳಿಯ ಹಿಂದಿನ ಕಾರಣ, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆಯ ಹಿನ್ನೆಲೆಯನ್ನು ಪತ್ತೆಹಚ್ಚಲು ತೀವ್ರ ಪ್ರಯತ್ನ ನಡೆಯುತ್ತಿದೆ.

ಮುತ್ತಪ್ಪ ರೈ ಮೊದಲ ಪತ್ನಿ ರೇಖಾ ರೈ ಸಾವನ್ನಪ್ಪಿದ ನಂತರ ಅನುರಾಧ ರೈ ಅನ್ನೋರನ್ನ 2ನೇ ಮದುವೆ ಮಾಡಿಕೊಂಡಿದ್ರು. ಆದರೆ ಮುತ್ತಪ್ಪ ರೈಗೆ ಅನಾರೋಗ್ಯ ಸಮಸ್ಯೆ ಶುರುವಾಗ್ತಿದ್ದಂತೆ. ಆಸ್ತಿ ಸಂಬಂಧ ಗಲಾಟೆಗಳು ಶುರುವಾಗಿದ್ದವು.
ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಹೀಗಿದ್ದರೂ ಅವರ ಸಾವಿನ ಬಳಿಕ ಅವರ ಎರಡನೇ ಪತ್ನಿ ಅನುರಾಧಾ ಪಾಲು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.



