ಇಂದು (ಮೇ 18ರಂದು) ಕಳಸದ ಚಂದ್ರನಾಥ ಸ್ವಾಮಿ ಬಸದಿ ಜೀಣೋದ್ಧಾರ ಸಮಿತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಅಖಿಲ ಕರ್ನಾಟಕ ಮೊದಲ ಜೈನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಡಿ.ಶ್ರೀವರ್ಮ ಹೆಗ್ಗಡೆ ಆಯ್ಕೆ ಆಗಿದ್ದಾರೆ.
ಚಂದ್ರನಾಥ ಬಸದಿ ಪಂಚಕಲ್ಯಾಣದ ಮೊದಲ ದಿನ ರಾಜ್ಯ ಮಟ್ಟದ ಮೊದಲ ಜೈನ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಭೈರವರಸ ವೇದಿಕೆಯಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷರಾಗಿ ಹೊರನಾಡು ದೊಡ್ಡಮನೆ ಮೂಲದ ಡಿ.ಶ್ರೀವರ್ಮ ಹೆಗ್ಗಡೆ ಅವರು ಮುನ್ನಡೆಸಲಿದ್ಧಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಸಾಹಿತಿ, ವಿದ್ವಾಂಸರಾದ ಶ್ರೀವರ್ಮ ಹೆಗ್ಗಡೆ, ಹೊರನಾಡು ದೊಡ್ಡಮನೆಯ ಪಾಳೆಗಾರ ಅರಸೊತ್ತಿಗೆಯ ಹೆಗ್ಗಡೆ ಮನೆತನದವರು. ಕಳಸ, ಜಯಪುರ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಬಾಲ್ಯದಿಂದಲೇ ವಾಕ್ಪಟು ಎಂದು ಮೈಸೂರಿನ ರಾಜ್ಯಪಾಲರಿಂದ ಗೌರವಿಸಲ್ಪಟ್ಟಿದ್ದರು.
ಪೆರಿಯಾರ್ ಸಂಪರ್ಕ ಹೊಂದಿದ್ದ ಅವರು ವೈಚಾರಿಕತೆ ಬಗ್ಗೆ ಬರವಣಿಗೆ ಮಾಡಿದ್ದರು. ತೀರ್ಥಂಕರ ಮಹಾವೀರ, ಧರ್ಮಚಕ್ರ ಶ್ರೀವಿಹಾರ, ಸಮಾಧಿ ಮರಣ ಮತ್ತಿತರ ಹಲವಾರು ಕೃತಿಗಳ ರಚನೆ ಮಾಡಿರುವ ಅವರಿಗೆ 1991ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಡಿಲಿಟ್ ಪದವಿ ನೀಡಿದೆ.



