ಚಿಕ್ಕಮಗಳೂರು ಜಿಲ್ಲೆ ಕಳಸ ಪಟ್ಟಣದ ಕೆಳಂಗಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಭವ್ಯವಾದ ಚಂದ್ರನಾಥ ಸ್ವಾಮಿ ಬಸದಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿ ಮೇ 18ರಿಂದ 22ರವರೆಗೆ ಧಾಮಸಂಪ್ರೋಕ್ಷಣೆ ಮತ್ತು ಪಂಚಕಲ್ಯಾಣದ ವಿಧಿಗಳು ನೆರವೇರಲಿದೆ.
ಮೂರು ವರ್ಷದ ಹಿಂದೆ ಆರಂಭವಾದ ಬಸದಿಗಳ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡು ಅತ್ಯಂತ ಸುಂದರ ವಾಸ್ತುಶಿಲ್ಪದಿಂದ ನಯನಮನೋಹರವಾಗಿದೆ ಚಂದ್ರನಾಥ ಬಸದಿಯ ಪಕ್ಕದಲ್ಲೇ ಪದ್ಮಾವತಿ ದೇವಸ್ಥಾನ, ಕ್ಷೇತ್ರಪಾಲ ಗುಡಿಯ ಶಿಲಾಮಯ ನಿರ್ಮಾಣವೂ ನಡೆದಿದೆ.

ಚಂದ್ರನಾಥ ಬಸದಿಯ ಐತಿಹಾಸಿಕ ಚಂದ್ರನಾಥ ಮೂರ್ತಿಯ ಜೊತೆಗೆ ನೂತನವಾಗಿ ಜ್ವಾಲಾಮಾಲಿನಿ ಮತ್ತು ಶ್ಯಾಮಯಕ್ಷ ಪ್ರತಿಷ್ಟಾಪನೆ ನೆರವೇರಲಿದೆ. ಪದ್ಮಾವತಿ ದೇವಸ್ಥಾನದಲ್ಲಿ ನೂತನ ಪಾಶ್ರ್ವನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಪಂಚಕಲ್ಯಾಣದ 5 ದಿನವೂ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಲಿದೆ.
18ರಂದು ರಾಜ್ಯ ಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಶ್ರೀವರ್ಮ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ನಾಡಿನ ಹೆಸರಾಂತ ಮುಖಂಡರು ಭಾಗವಹಿಸಲಿದ್ದಾರೆ. ಪ್ರತಿದಿನ ಸಂಜೆ 6ರಿಂದ ಸ್ಥಳೀಯ ಮಹಿಳೆಯರು ಮತ್ತು ವೃತ್ತಿಪರ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ.

ಜೈನ ಮುನಿ ಮಹಿಮಾಸಾಗರ್ ಅವರ ಪ್ರೇರಣೆಯಿಂದಾಗಿ ನೂತನ ಶಿಲಾಮಯ ಬಸದಿ ನಿರ್ಮಾಣದ ಸಾಹಸಕ್ಕೆ ಕೈಹಾಕಿದೆವು. ಕಳಸ ಸೀಮೆಯ ಎಲ್ಲ ಶ್ರಾವಕರು, ವಿವಿಧ ಮಠಾಧೀಶರು ನೀಡಿದ ಸಹಕಾರದಿಂದ ಸುಂದರವಾದ ಶಿಲಾಮಯ ಬಸದಿ ನಿರ್ಮಾಣವಾಗಿದ್ದು ಇದು ಕಳಸ ಸೀಮೆಯ ಸಮಸ್ತ ಜೈನಬಾಂಧವರು ಮತ್ತು ಸರ್ವ ಜನಾಂಗಕ್ಕೆ ಆಧ್ಯಾತ್ಮಿಕವಾಗಿ ಪ್ರೇರಣದಾಯಕ ಧಾರ್ಮಿಕ ಕೇಂದ್ರವಾಗಿ ಒಡಮೂಡಿದೆ.
ಮೇ 18 ರಿಂದ ಆರಂಭವಾಗಲಿರುವ ಧಾಮಸಂಪ್ರೋಕ್ಷಣೆ ಮತ್ತು ಪಂಚಕಲ್ಯಾಣದ ವಿಧಿ ಕಾರ್ಯಕ್ರಮಗಳಲ್ಲಿ ಸಮಸ್ತ ಜನರು ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರ ಮತ್ತು ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿದ್ದಾರೆ.





