ತಾಳಿ ಕಟ್ಟುವ ವೇಳೆ ಮದುವೆ ಮುರಿದುಕೊಂಡಿದ್ದ ವಧುವಿಗೆ ಅದೇ ದಿನ ಆಕೆಯ ಪ್ರಿಯಕರನ ಜೊತೆಯೇ ಮದುವೆ ಮಾಡಿಸಿರುವ ಘಟನೆ ಶುಕ್ರವಾರ ಹಾಸನದಲ್ಲಿ ನಡೆದಿದೆ. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಇಷ್ಟ ಇಲ್ಲ ಅಂತ ಹೇಳಿದ್ದರಿಂದ ಮದುವೆ ಮುರಿದುಬಿದ್ದಿತ್ತು. ಆನಂತರ ವಧು ತಾನು ಪ್ರೀತಿಸುತ್ತಿದ್ದ ಯುವಕನಿಗಾಗಿ ಮದುವೆ ಆಗಲು ನಿರಾಕರಿಸಿದ್ದ ವಿಚಾರ ತಿಳಿದ ಪೋಷಕರು ಇದೀಗ ತಮ್ಮ ಮಗಳ ಇಷ್ಟದಂತೆ ಪ್ರಿಯಕರ ರಘು ಜೊತೆ ಪಲ್ಲವಿಯ ಮದುವೆಯನ್ನು ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿಸಿದ್ದಾರೆ.
ಏನಿದು ಪ್ರಕರಣ ?
ಹಾಸನ ಹೊರವಲಯದ ಬೂವನಹಳ್ಳಿಯ ಪಲ್ಲವಿ ಮತ್ತು ಆಲೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೇಣುಗೋಪಾಲ ಜಿ. ನಡುವೆ ಮೂರು ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಶುಕ್ರವಾರ ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟದಲ್ಲಿ ವಿವಾಹ ಮಹೋತ್ಸವ ಏರ್ಪಡಿಸಲಾಗಿತ್ತು. ಮುಹೂರ್ತದ ಸಮಯದಲ್ಲಿ ವಧುವಿಗೆ ಒಂದು ಫೋನ್ ಕರೆ ಬಂದಿತ್ತು. ಆ ಫೋನ್ ಕರೆ ಬಂದ ನಂತರ ವಧುವಿನ ವರಸೆ ಬದಲಾಯಿತು. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಪಲ್ಲವಿ ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಪಟ್ಟು ಹಿಡಿದ ಕಾರಣ ಮದುವೆ ಮುರಿದು ಬಿದ್ದಿತ್ತು. ಯಾರು ಎಷ್ಟೇ ಮನವೊಲಿಸಿದರೂ ಮನಸ್ಸು ಬದಲಾಯಿಸಲಿಲ್ಲ. ಕಡೆಗೆ ತಾಯಿ ಹಾಗೂ ವರ ಕೇಳಿಕೊಂಡರೂ ಪಲ್ಲವಿ ಮನಸ್ಸು ಕರಗಲಿಲ್ಲ. ಪರಿಣಾಮ ಮದುವೆ ಮುರಿದು ಬಿದ್ದಿತ್ತು. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ, ಯಾವುದೇ ಫಲಪ್ರದ ಆಗಲಿಲ್ಲ. ಪಲ್ಲವಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವೆ ಎಂದು ಪೊಲೀಸರ ಮುಂದೆಯೂ ತಿಳಿಸಿದ್ದಳು. ಪೋಷಕರು ಬೇರೆ ದಾರಿ ಕಾಣದೇ ಮಗಳು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಡಲು ಒಪ್ಪಿಗೆ ಸೂಚಿಸಿದ್ದರು.

ರಾತ್ರಿ ವೇಳೆಗೆ ತಾನು ಪ್ರೀತಿಸಿದ ಯುವಕನೊಂದಿಗೆ ಪಲ್ಲವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಹಾಸನ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣಮಂಟಪಕ್ಕೆ ಹೊಂದಿಕೊಂಡಿರುವ ಗಣಪತಿ ದೇವಾಲಯದಲ್ಲಿ ಮಗಳ ಇಚ್ಛೆಯಂತೆಯೇ ಪ್ರಿಯಕರ ರಘು ಜೊತೆ ಪೋಷಕರು ಸರಳ ವಿವಾಹ ನೆರವೇರಿಸಿದರು. ಪ್ರಿಯತಮೆ ಪಲ್ಲವಿಗೆ ಪ್ರಿಯಕರ ರಘು ತಾಳಿ ಕಟ್ಟಿದ್ದು, ಇದಕ್ಕೆ ಎರಡೂ ಕಡೆಯ ಕುಟುಂಬಸ್ಥರು ಸಾಕ್ಷಿಯಾದರು.
ರಘು ಮೂಲತಃ ಹಾಸನ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾಗಿದ್ದು, ಟ್ರಾನ್ಸ್‌ಪೋರ್ಟ್ ಬ್ಯುಸಿನೆಸ್ ಮಾಡಿಕೊಂಡಿದ್ದಾನೆ. ಹಲವು ತಿಂಗಳುಗಳಿಂದ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇದನ್ನು ಹೆತ್ತವರ ಬಳಿ ಹೇಳಿಕೊಳ್ಳಲು ಪಲ್ಲವಿಗೆ ಧೈರ್ಯ ಇರಲಿಲ್ಲ. ಪರಿಣಾಮ ಮದುವೆಗೆ ಒಪ್ಪಿಕೊಂಡಿದ್ದಳು. ಈ ಸಂದರ್ಭದಲ್ಲಿ ಪ್ರಿಯಕರ ಕರೆ ಮಾಡಿ ನಾನೇ ನಿನ್ನನ್ನು ಮದುವೆ ಆಗುವೆ ಎಂದು ಹೇಳಿದ ನಂತರ ಕಡೇ ಕ್ಷಣದಲ್ಲಿ ತಾಳಿ ಕಟ್ಟಿಕೊಳ್ಳಲು ನಿರಾಕರಿಸಿದ್ದರಿಂದ ಮದುವೆ ಮುರಿದು ಬಿದ್ದಿತ್ತು. ಈಗ ಪರಸ್ಪರ ಪ್ರೀತಿಸಿದ್ದ ಜೋಡಿಗಳು ಒಂದಾಗಿವೆ.
ಆದರೆ ಮದುವೆ ನಿಶ್ವಯವಾಗಿದ್ದ ವರ ಹಾಗೂ ಆತನ ಕುಟುಂಬಸ್ಥರು ನೋವಿನಿಂದಲೇ ಕಲ್ಯಾಣ ಮಂಟಪದಿಂದ ಹೊರ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಧುವಿಗೆ ನೀಡಿದ ಒಡವೆ, ಧಾರೆ ಸೀರೆ, ಖರ್ಚು ಮಾಡಿದ ಹಣ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ.



