ಮಗುವಿಗೆ ಸಂಸ್ಕಾರಯುತ ಶಿಕ್ಷಣವೇ ನಿಜವಾದ ಸಂಪತ್ತಾಗಿದೆ ಎಂದು ಅರಕಲಗೋಡು ಅರೆಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್ ನಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಭಾದ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಉಪನಯನ ಹಾಗೂ ವಿಶ್ವಕರ್ಮ ಮಹಾಯಜ್ಞದಲ್ಲಿ ಭಾಗವಹಿಸಿ, ಆಶೀರ್ವಚನ ನೀಡಿ ಮಾತನಾಡಿದರು.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಸುಸಂಸ್ಕøತರಾಗಬೇಕೆಂಬ ಮಹದಾಸೆ ಇರುತ್ತದೆ. ಆದರೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡದಿದ್ದರೆ ಬೇವನ್ನು ಬಿತ್ತಿ, ಮಾವನ್ನು ನಿರೀಕ್ಷಿಸಿದಂತಾಗುತ್ತದೆ. ಮಕ್ಕಳಿಗೆ ಮಾತೃವಾತ್ಸಲ್ಯ, ಗುರುಪರಂಪರೆ ಬಹುಮುಖ್ಯ ಅಂಶಗಳಾಗಿವೆ. ಪ್ರತಿ ಮಗುವಿಗೂ ಗುರುವಿನ ಅನುಗ್ರಹ ಅಗತ್ಯವಾಗಿರುತ್ತದೆ. ಮಕ್ಕಳನ್ನು ಮೊಬೈಲ್‍ನಿಂದ ದೂರವಿರುವಂತೆ ಜಾಗೃತ ವಹಿಸಬೇಕೆಂದು ಸಲಹೆ ನೀಡಿದರು.
ಚೆನ್ನಗಿರಿಯ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಧರ್ಮ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆಂತರ್ಯದಲ್ಲಿ ಯಾವುದೇ ವೆತ್ಯಾಸವಿದ್ದರೂ ಬಾಹ್ಯವಾಗಿ ಎಲ್ಲರೂ ಒಂದಾಗಿ ನಿಲ್ಲಬೇಕಿದೆ. ವಿಶ್ವಕರ್ಮ ಸಮುದಾಯವು ಸಮಾಜದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿದ್ದು, ಸಂಘಟನೆಯ ಮೂಲಕ ಸಮುದಾಯವು ಬಲಿಷ್ಟ್ಟವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಹಾಗೂ ಸಮುದಾಯದ ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ರಘುಪತಿ ಪುರೋಹಿತರ ನೇತೃತ್ವದಲ್ಲಿ 65 ವಟುಗಳಿಗೆ ಉಪನಯನ ಹಾಗೂ ಧರ್ಮೋಪದೇಶ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಜುನಾಥ ಆಚಾರ್ಯ ವಹಿಸಿದ್ದರು. ಸುಬ್ರಮಣ್ಯ ಅಂಗಡಿ, ಕನ್ನೆಹಳ್ಳಿ ಮಂಜುನಾಥ್, ಕುಮಾರ ಆಚಾರ್, ಕಡಿದಾಳ್ ರಮೇಶ್, ಶಂಕರಾಚಾರ್ ಬೆಳಗಾವಿ, ಚಂದ್ರಚಾರ್ ಮೆಣಸಮಕ್ಕಿ, ಸತೀಶ್ ಉಗ್ಗೆಹಳ್ಳಿ, ವಾಸುದೇವ, ಪರಮೇಶಾಚಾರ್, ಶಿವಶಂಕರ್, ಸಂಧ್ಯಾ, ಹಳಿಯೂರು ನಾರಾಯಣಚಾರ್, ಉಮಾಶಂಕರ್, ಗಣಪತಿಆಚಾರ್, ಮಂಜುನಾಥಚಾರ್ ಘಟ್ಟದಹಳ್ಳಿ, ಚಂದ್ರಾವತಿ, ಸಂಧ್ಯಾ, ಆಶಾ, ಪುಷ್ಪ ಮತ್ತಿತರರಿದ್ದರು.



