ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಶುಕ್ರವಾರ ಅಬ್ಬರದ ಮಳೆ ಹಾಗೂ ಬಿರುಗಾಳಿ ಬೀಸಿದೆ. ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಬಣಕಲ್ ಚಿಕ್ಕಮಗಳೂರು ತಾಲ್ಲೂಕುಕಿನ ಆಲ್ದೂರು ಹಾಗೂ ಸುತ್ತಮುತ್ತ ಭಾರೀ ಗಾಳಿ ಮಳೆಯಾಗಿದೆ. ಗುಡುಗು-ಸಿಡಿಲಿನ ಸಹಿತ ಭಾರೀ ಮಳೆ ಸುರಿದಿದ್ದು, ಹಲವೆಡೆ ಭಾರೀ ಆಲಿಕಲ್ಲಿನ ಮಳೆಯಾಗಿದೆ.
ಸಂಜೆ ಸಮಯದಲ್ಲಿ ಇದ್ದಕ್ಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಸಂತಸ ತಂದಿದೆ. ವಿಶೇಷವಾಗಿ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಬೀಳುತ್ತಿರುವ ಆಲಿಕಲ್ಲು ಮಳೆಯಿಂದ ರೈತರು ಬೆಳೆನಷ್ಟದ ಭೀತಿಯಿಂದ ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಶುಕ್ರವಾರದ ಮಳೆ ಆವಾಂತರ ಸೃಷ್ಟಿಸಿದೆ. ಮಳೆಯಿಂದ ಮರವೊಂದು ವಿದ್ಯುತ್ ಲೈನಿನ ಮೇಲೆ ಬಿದ್ದು, ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅನೇಕ ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿವೆ.



