ಕೇರಳಕ್ಕೆ ಮಾನ್ಸೂನ್ ಮಾರುತಗಳು ಅಪ್ಪಳಿಸಿದರೇ, ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡು ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೆಲ ಗ್ರಾಮಗಳಲ್ಲಿ ವಿದ್ಯುತ್ ಕಂಬ, ಬೃಹತ್ ಮರಗಳು ಧರೆಗುರುಳಿವೆ. ಮೂಡಿಗೆರೆ ತಾಲೂಕಿನ ಜಾರಗಲ್ ಗ್ರಾಮದಲ್ಲಿ ಮನೆ ಪಕ್ಕದ ತಡೆಗೋಡೆ ಕುಸಿದಿದೆ.

ಚಕ್ಕಮಕ್ಕಿ ಗ್ರಾಮದಲ್ಲಿ ಕುರಿ ಶೆಡ್ ಕುಸಿದು 3 ಕುರಿಗಳು ಸಾವನ್ನಪ್ಪಿವೆ. ತ್ರಿಪುರ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು, ಕಾರು ಜಖಂಗೊಂಡಿದೆ.
ಗೋಣಿಬೀಡು ಸಮೀಪದ ಕಸ್ಕೆಬೈಲ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಬೃಹತ್ ಮರವು ರಸ್ತೆಗೆ ಅಡ್ಡವಾಗಿ ಬಿದ್ದು ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.
ಮೂಡಿಗೆರೆ ತಾಲ್ಲೂಕಿನ ದೇವರಮನೆಯಲ್ಲಿ ಶನಿವಾರ ಅತ್ಯದಿಕ 10 ಇಂಚು ಮಳೆಯಾಗಿದೆ. ಗುತ್ತಿ, ತ್ರಿಪುರ, ಪಟ್ಟದೂರು, ಕೊಟ್ಟಿಗೆಹಾರ, ಊರುಬಗೆ, ಗೌಡಹಳ್ಳಿ ಭಾಗದಲ್ಲಿ 6 ರಿಂದ 7 ಇಂಚು ಮಳೆ ದಾಖಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಗಾಳಿಗೆ ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಕಾಫಿ ತೋಟಗಳಲ್ಲಿ ಬೃಹತ್ ಮರಗಳು ಹಾಗೂ ಕಾಫಿ ಗಿಡದ ರೆಂಬೆಗಳು ಮುರಿದು ಬಿದ್ದಿದ್ದು, ತೋಟಗಳಿಗೆ ಹೆಚ್ಚಿನ ಹಾನಿಯುಂಟಾಗಿದೆ. ವಿದ್ಯುತ್ ಸಂಪರ್ಕ ಪುನಃ ಸ್ಥಾಪಿಸಲು ಮೆಸ್ಕಾಂ ಸಿಬ್ಬಂದಿಗಳು ಮಳೆಯ ಮಧ್ಯೆ ಹರಸಾಹಸಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಮೇ 28 ರವೆರೆಗೆ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಾಗೂ ಬೆಂಗಳೂರಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.



