ಮಕ್ಕಳಿಗೆ ಶಿಕ್ಷೆ ನೀಡಿ ಶಿಕ್ಷಣ ನೀಡುವ ಕಾಲ ಕಳೆದು ಹೋಗಿದೆ. ಈಗ ಮಕ್ಕಳಿಗೆ ಪ್ರೀತಿಯಿಂದ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಜವಾಬ್ದಾರಿ ಎಲ್ಲಾ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದು ಮೂಡಿಗೆರೆ ತಹಸೀಲ್ದಾರ್ ರಾಜಶೇಖರ್ ಮೂರ್ತಿ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ಬಿಳಗುಳ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರಕಾರದಿಂದ ಸರಕಾರಿ ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯ ಸಿಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಬಳಸಿಕೊಳ್ಳಬೇಕು. ಸರಕಾರಿ ಶಾಲೆ ಎಂಬ ತಾತ್ಸಾರ ಪೋಷಕರು ಬಿಡಬೇಕು. ಸರಕಾರಿ ಶಾಲೆಗಳು ಶಾಸಗಿ ಶಾಲೆಗಳಿಗೆ ಮೀರಿಸುವಂತೆ ಫಲಿತಾಂಶ ನೀಡುತ್ತಿವೆ. ಇದನ್ನು ಮನಗೊಂಡು ಮಕ್ಕಳನ್ನು ಸರಕರಿ ಶಾಲೆಗಳಿಗೆ ಸೇರಿಸಬೇಕೆಂದು ಮನವಿ ಮಾಡಿದರು.
ಬಿಇಒ ಎನ್.ಎ.ಮೀನಾಕ್ಷಿ ಮಾತನಾಡಿ, ಮಕ್ಕಳನ್ನು ಶಾಲೆಗಳಿಗೆ ಪ್ರೀತಿಪೂರ್ವಕವಾಗಿ ಬರಮಾಡಿಕೊಂಡು ಶಿಕ್ಷಣದ ಬಗ್ಗೆ ಪ್ರೀತಿ ಬೆಳೆಸುವ ಉದ್ದೇಶದಿಂದ ಸರಕಾರ ಪ್ರತಿವರ್ಷ ಈ ಕಾರ್ಯಕ್ರಮ ನಡೆಸುತ್ತಿದೆ. ಶಾಲೆಯ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡು ಶಾಲೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ತಾಲೂಕಿನಲ್ಲಿ ಈಗಾಗಲೇ ಶಾಲೆಗಳ ಕಟ್ಟಡ ಸುವ್ಯವಸ್ಥೆಯಲ್ಲಿದೆ. ಆದರೂ ಮಳೆಯಿಂದ ತೊಂದರೆ ಎದುರಾದರೆ ಕೂಡಲೇ ಗಮನಕ್ಕೆ ತರಲು ಎಲ್ಲಾ ಶಿಕ್ಷಕರಿಗೆ ಸೂಚಿಸಲಾಗಿದೆ. ಮಳೆಯಿಂದ ಶಾಲೆಗಳಿಗೆ ರಜೆ ನೀಡಿದರೆ ಅದನ್ನು ಸರಿದೂಗಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಶೈಕ್ಷಣಿಕ ವರ್ಷದ ಅವಧಿ ಕಡಿಮೆಯಾದಂತೆ ಯೋಜನೆ ರೂಪಿಸಲಾಗಿದೆ. ಅಲ್ಲದೇ ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಜೊತೆಗೂಡಿ ಮನೆ ಮನೆ ಭೇಟಿ ನೀಡಿ ದಾಖಲಾತಿ ಆಂದೋಲನ ಹಮ್ಮಿಕೊಂಡು ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್ ವಹಿಸಿದ್ದರು. ಹೆಸಗಲ್ ಗ್ರಾ.ಪಂ. ಪಿಡಿಒ ಸೌಮ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಸಿ.ಶ್ರೀನಿವಾಸ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಹೇಮಂತಚಂದ್ರ, ಶಾಲಾ ಮುಖ್ಯ ಶಿಕ್ಷಕಿ ಚುಡಾಮಣಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಗೌರವಾಧ್ಯಕ್ಷ ಎಂ.ಹೆಚ್. ಅಮರನಾಥ್, ಎಸ್‍ಡಿಎಂಸಿ ಸದಸ್ಯರಾದ ರಾಜೇಶ, ರಮ್ಯಾ, ಸೌಮ್ಯ ಮತ್ತಿತರರಿದ್ದರು.



