ಪರಿಸರವನ್ನು ಕಾಪಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಬಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಕಾವ್ಯ ಹೇಳಿದರು.
ಅವರು ಗುರುವಾರ ಪಟ್ಟಣದ ಲಯನ್ಸ್ ವೃತ್ತದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ನಳಂದ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಡು ಉಳಿಸದಿದ್ದರೆ ಮಾನವ ಸೇರಿದಂತೆ ಯಾವ ಜೀವ ಸಂಕುಲವು ಬದುಕಲು ಸಾಧ್ಯವಿಲ್ಲ. ಹಾಗಾಗಿ ವನ್ಯಜೀವಿ, ಕಾಡುಗಳು ಹಾಗೂ ಪರಿಸರ ನಾಶದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂ.5ರಂದು ವಿಶ್ಚದಾಧ್ಯಂತ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪಿಎಸ್‍ಐ ಶ್ರೀನಾಥ್ ರೆಡ್ಡಿ ಮಾತನಾಡಿ, ಪರಿಸರದಲ್ಲಿರುವ ಕಾಡು, ಮಣ್ಣು, ನೀರು ಕಲುಷಿತವಾಗಬಾರದೆಂದರೆ ಪರಿಸರ ಸಂರಕ್ಷಣೆ ಮಾಡಬೇಕು. ವಾಹನಗಳಿಂದ ಹೊರ ಬರುವ ಹೊಗೆಯಿಂದ ಪರಿಸರ ಮಾಲೀನ್ಯವಾಗುತ್ತಿದ್ದ ಹಿನ್ನಲೆಯಲ್ಲಿ ಸರಕಾರ ಎಲೆಕ್ಟ್ರಿಕ್ ವಾಹನ ಬಳಕೆ ಮಾಡುವುದು ಸೇರಿದಂತೆ ಅನೇಕ ರೀತಿಯ ಕ್ರಮ ವಹಿಸಿದೆ. ಅತೀ ಹೆಚ್ಚು ಹೊಗೆ ಬರುವ ವಾಹನಗಳ ತಪಾಸಣೆ ಮಾಡಿಸಿಕೊಳ್ಳಬೇಕು. ಜತೆಗೆ ಪ್ರತಿ ಮನೆಯಲ್ಲಿ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಿ ಹೆಮ್ಮರವನ್ನಾಗಿ ಮಾಡಿ ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ನಳಂದ ಶಾಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತು.
ಯು.ಬಿ.ಮಂಜಯಯ್ಯ, ಹೆಸಗಲ್ ಗಿರೀಶ್, ಬಕ್ಕಿ ರವಿ, ಕೃಷ್ಣ ಮಗ್ಗಲಮಕ್ಕಿ, ರಾಮು ಹಳೆಮೂಡಿಗೆರೆ, ಗಣೇಶ್, ನಳಂದ ಶಾಲೆ ಸಂಯೋಜಕಿ ಅರ್ಪಿತಾ, ಶಿಕ್ಷಕರಾದ ಅಕ್ಷತಾ, ನಿರಂಜನ್, ಅಣ್ಣಪ್ಪನಾಯಕ್, ಜಯಪಾಲ್ ಮತ್ತಿತರರಿದ್ದರು.



